ಜಿಲ್ಲೆ

ಗಜೇಂದ್ರಗಡದಲ್ಲಿ ಜೂಜುಕೋರರ ಹಾವಳಿ ಜೋರು

Gadag

ಗಜೇಂದ್ರಗಡ: ಜಿಲ್ಲೆಯಲ್ಲಿ ಸೆಮಿ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಅನಗತ್ಯವಾಗಿ ಹೊರಗೆ ಓಡಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೇ ನೆಪ ಮಾಡಿಕೊಂಡ ಜೂಜುಕೋರರು ತಾಲೂಕಿನಾದ್ಯಂತ ನಾಯಿಕೊಡೆಗಳಂತೆ ಜೂಜು ಅಡ್ಡೆ ಆರಂಭಿಸಿದ್ದಾರೆ. ಕೆಲವೆಡೆ ಕದ್ದುಮುಚ್ಚಿ ಆಡಿಸಲಾಗುತ್ತಿದ್ದರೆ, ಮತ್ತೆ ಕೆಲವೆಡೆ ರಾಜಾರೋಷವಾಗಿಯೇ ಎಲೆತಟ್ಟಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಹಲವಾರು ಜನರು ಮನೆ-ಮಠ ಕಳೆದುಕೊಳ್ಳುವ ಪರಿಸ್ಥಿತಿ ತಲುಪಿದ್ದಾರೆ. ಊರ ಹೊರಗಿನ ಹೊಲಗಳು ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆಯಾಗಿವೆ. ಇದರಿಂದ ಗಜೇಂದ್ರಗಡ ಜೂಜುಕೋರರ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಲಾಕ್​ಡೌನ್ ವೇಳೆ ಕೆಲಸವಿಲ್ಲದೆ ಖಾಲಿ ಕುಳಿತಿರುವ ಜನರಿಗೆ ಜೂಜು ಆಡಿಸುವವರು ಆಮಿಷ ಒಡ್ಡುವ ಮೂಲಕ ಖೆಡ್ಡಾಕ್ಕೆ ಬೀಳಿಸಲು ಯತ್ನಿಸುತ್ತಿದ್ದಾರೆ.

ಲಾಕ್​ಡೌನ್​ಗೂ ಪಟ್ಟಣದ ಹೊರ ವಲಯದ ನಿರ್ದಿಷ್ಟ ಸ್ಥಳಗಳಲ್ಲಿ ಇಸ್ಪೀಟ್ ಆಡುತ್ತಿದ್ದ ಜೂಜುಕೋರರು, ಲಾಕ್​ಡೌನ್ ಆರಂಭವಾಗುತ್ತಿದ್ದಂತೆ ಪಟ್ಟಣದ ಗುಡ್ಡದ ಭಾಗದಲ್ಲಿನ ಕಲ್ಲುಗಳ ಮರೆಯಲ್ಲಿ, ರೋಣ ಹಾಗೂ ಕುಷ್ಟಗಿ ರಸ್ತೆಯಲ್ಲಿನ ಹೊಲಗಳಲ್ಲಿ ಹಾಗೂ ಕುಂಟೋಜಿ, ಗೋಗೇರಿ, ಸೂಡಿ, ಬೇವಿನಕಟ್ಟಿ, ಲಕ್ಕಲಕಟ್ಟಿ, ಕಾಲಕಾಲೇಶ್ವರ, ರಾಜೂರು, ಕೊಡಗನೂರು ಗ್ರಾಮಗಳಲ್ಲಿ ಜೂಜಾಟಗಳು ಸದ್ದಿಲ್ಲದೆ ಹಗಲೂರಾತ್ರಿ ಸಾಗಿವೆ. ಪೊಲೀಸರು ಮಾತ್ರ ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲದ ಹಾಗಿದ್ದಾರೆ. ಮೇ ತಿಂಗಳಲ್ಲಿ 6 ಹಾಗೂ ಜೂನ್ 15 ರವರೆಗೆ ಕೇವಲ ಒಂದು ಪ್ರಕರಣ ದಾಖಲಾಗಿದೆ. ಹೀಗಾಗಿ, ಪೊಲೀಸರು ಏನೂ ಮಾಡಲ್ಲ ಎಂಬ ಭಂಡ ಧೈರ್ಯ ಈ ಪುಂಡರಿಗಿದೆ. ಲಾಕ್​ಡೌನ್​ನಿಂದ ಈಗಾಗಲೇ ಹಲವು ಕಾರ್ವಿುಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಸಯದಲ್ಲಿ ಜೂಜಾಟದಲ್ಲಿ ಹಣ ಕಳೆದುಕೊಂಡು ಕುಟುಂಬದವರನ್ನು ಬೀದಿಗೆ ತಳ್ಳುವ ಮೊದಲೇ ಪೊಲೀಸರು ಎಚ್ಚೆತ್ತುಕೊಂಡು ದಂಧೆಕೋರರ ಹೆಡೆಮುರಿ ಕಟ್ಟಬೇಕಿದೆ.

ನನ್ನ ಗಂಡನ ಸಲುವಾಗಿ ಸಾಕಾಗೇತರಿ.. ದಿನಾಲೂ ಇಸ್ಪೀಟ್ ಆಡಕ ಹೋಗ್ತಾರ. ನಮ್ಮ ತವರು ಮನೆಯವರು ಮಾಡಿಸಿಕೊಟ್ಟ ಚಿನ್ನದ ತಾಳಿ ಮಾರ್ಯಾರ. ಸ್ವಂತ ಮನೆ, ಬೈಕ್ ಒತ್ತಿ ಇಟ್ಟು ನಮ್ಮನ್ನ ಬಾಡಿಗೆ ಮನ್ಯಾಗ ಇಟ್ಟಾರ. ಈ ಇಸ್ಪೀಟ್ ಆಟಕ್ಕ ಎಷ್ಟು ರೊಕ್ಕ ಆದ್ರನೂ ಸಾಲಂಗಿಲ್ಲ. ಈಗ ನನ್ನ ಗಂಡನ್ನ ಕೇಳಕೊಂಡು ಪ್ರತಿದಿನ ಮನಿಗೆ ಸಾಲಗಾರರು ಬರ್ತಾರಿ. ನಮಗಂತೂ ಜೀವನಾನ ಬ್ಯಾಡಾಗೇತಿ. ಈ ದಂಧೆ ಬಂದ್ ಮಾಡ್ಸಾಕ್ ಯಾರೂ ಇಲ್ಲ ಅನಸೈತ್ರೀ.| ಹೆಸರು ಹೇಳಲು ಇಚ್ಛಿಸದ ಮಹಿಳೆ ಗಜೇಂದ್ರಗಡ
ನಾನು ವರ್ಗಾವಣೆಯಾಗಿ ಬಂದು ಈಗ 8 ದಿನಗಳಾಗಿವೆ. ಗಜೇಂದ್ರಗಡ ಪೋಲಿಸರು ಅತಿ ಹೆಚ್ಚು ಇಸ್ಪೀಟ್ ದಂಧೆಕೋರರನ್ನು ಹಿಡಿದಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಮುಂದೆಯೂ ಜೂಜುಕೋರರನ್ನು ಪತ್ತೆ ಹಚ್ಚಿ ಹಿಡಿದು ಕಾನೂನು ಕ್ರಮ ಕೈಗೊಳ್ಳಲಾಗುವುದು.| ಸುಧೀರ ಬೆಂಕಿ ಸಿಪಿಐ ರೋಣ