ಜಿಲ್ಲೆ

ಗಜಲಕ್ಷ್ಮಿಗಾಗಿ ಒಗ್ಗಟ್ಟಾದ ಕರ್ನಾಟಕ-ಮಹಾರಾಷ್ಟ್ರ ಭಕ್ತರು

ಗಜಲಕ್ಷ್ಮಿಗಾಗಿ ಒಗ್ಗಟ್ಟಾದ ಕರ್ನಾಟಕ-ಮಹಾರಾಷ್ಟ್ರ ಭಕ್ತರು

ಆನಂದ ಭಮ್ಮನ್ನವರ

ಚಿಕ್ಕೋಡಿ:

ಗಡಿ ವಿಚಾರ ಬಂದಾಗ ಕರ್ನಾಟಕ-ಮಹಾರಾಷ್ಟ್ರ ಕದನ ಕಣ್ಮುಂದೆ ಬರುತ್ತದೆ. ಆದರೆ ಉಭಯ ರಾಜ್ಯಗಳ ಭಕ್ತರು ಒಗ್ಗಟ್ಟಾಗಿ 'ಗಜ' ರಕ್ಷಣೆ ಆಂದೋಲನ ಆರಂಭಿಸಿರುವುದು ಗಮನ ಸೆಳೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜೈನಮಠದ ಹೆಣ್ಣಾನೆಯನ್ನು (ಮಹಾದೇವಿ) ಗುಜರಾತಿನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲು ಕೋರ್ಟ್ ಆದೇಶಿಸಿದೆ. ಇದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ ಕೊಲ್ಲಾಪುರದಲ್ಲಿ ಜನಾಂದೋಲನ ಆರಂಭಗೊಂಡಿದೆ

ಮತ್ತೊಂದೆಡೆ ವನತಾರಾ ಕೇಂದ್ರ ಮುಕೇಶ ಅಂಬಾನಿ ಸಂಸ್ಥೆಗೆ ಸೇರಿರುವುದರಿಂದ 10 ಸಾವಿರಕ್ಕೂ ಅಧಿಕ ಜಿಯೋ ಸಿಮ್ ಗ್ರಾಹಕರು ಬೇರೆ ಸಂಸ್ಥೆಗೆ ಪೋರ್ಟ್‌ ಆಗುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆನೆ ಸ್ಥಳಾಂತರ ಏಕೆ?: ಶ್ರೀಮಠದ ಆನೆಯ ಆರೋಗ್ಯ ಹದಗೆಟ್ಟಿದ್ದು,ಮಾನಸಿಕ ಸ್ಥಿಮಿತ ತಪ್ಪಿರುವುದರಿಂದ ಅದನ್ನು ಜೈನ ಮಠದಿಂದ ಸ್ಥಳಾಂತರಿಸಬೇಕು ಎಂದು ಪ್ರಾಣಿ ದಯಾ ಸಂಸ್ಥೆ (ಪೇಟಾ) ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಗುಜರಾತಿನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸುವಂತೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶ ಎತ್ತಿ ಹಿಡಿದಿತ್ತು. ಅದರಂತೆ ಆನೆಯನ್ನು (ಮಹಾದೇವಿ) ಜು.28ರಂದು ವನತಾರಾಗೆ ಸ್ಥಳಾಂತರಿಸಲಾಗಿದೆ.

42 ಕಿಲೋಮೀಟರ್ ಮೌನ ಪಾದಯಾತ್ರೆ

ಮಹಾದೇವಿ ಆನೆಯನ್ನು ಮರಳಿ ಜೈನಮಠಕ್ಕೆ ಮರಳಿಸಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಜೈನ ಬಾಂಧವರು ಭಾನುವಾರ ನಾದಂಣಿ ಜೈನಮಠದಿಂದ ಕೊಲ್ಲಾಪುರದವರೆಗೆ 42 ಕಿಮೀ ಮೌನ ಪಾದಯಾತ್ರೆ ನಡೆಸಿ ಕೊಲ್ಲಾಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮಹಾದೇವಿ ಕಣ್ಙಿರು:

ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನಾಂದಣಿಯ ಜಿನಸೇನ ಹಾಕಿದ ಭಟ್ಟಾರಕ ಪಟ್ಟಾಚಾರ್ಯ ಜೈನ ಮಠದಲ್ಲಿ 30 ವರ್ಷದಿಂದ ಆನೆ ವಾಸವಿತ್ತು. ಭಕ್ತರು ಮತ್ತು ಮಠದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಆನೆಯನ್ನು ಕೋರ್ಟ್‌ ಆದೇಶದಂತೆ ಬೀಳ್ಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಆನೆ ಕೂಡ ಕಣ್ಣೀರು ಹಾಕಿತ್ತು.

ಎಲ್ಲ ಮಠಕ್ಕೂ ನೋಟಿಸ್‌!

ಮಹಾರಾಷ್ಟ್ರದ ಮಹಾದೇವಿ ಸ್ಥಳಾಂತರದಿಂದ ಆನೆ ಸಾಕಿರುವ ಮಠ ಹಾಗೂ ಆಶ್ರಮಗಳಿಗೂ ಸಂಕಷ್ಟ ಎದುರಾಗಿದೆ.

ಈಗಾಗಲೇ ಆನೆಗಳಿರುವ ಇತರ ಮಠಗಳಿಗೂ ಕೋರ್ಟ್ ನೋಟಿಸ್‌ ಜಾರಿಯಾಗಿದೆ ಎಂದು ಮಠದ ಭಕ್ತರು ಮಾಹಿತಿ ನೀಡಿದ್ದಾರೆ.

--

ನಾಂದಣಿ ಸುಪ್ರಸಿದ್ಧ ಜೈನ ಮಠ, ಇಲ್ಲಿನ ಆನೆಯೊಂದಿಗೆ ಗಡಿ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಜೈನ ಸಮುದಾಯ ಹಿಂಸೆ ಬಯಸುವುದಿಲ್ಲವಾದ್ದರಿಂದ ಆನೆಯನ್ನು ಮಠಕ್ಕೆ ಮರಳಿ ನೀಡಬೇಕು.

ರಮೇಶ ಕತ್ತಿ ಮಾಜಿ ಸಂಸದ, ಚಿಕ್ಕೋಡಿ

---

ನಾಂದಣಿ ಮಠದ ಆನೆ ಆರೋಗ್ಯದ ಬಗ್ಗೆ ಸಂಸ್ಥೆ ಸುಳ್ಳು ಮಾಹಿತಿ ನೀಡಿದೆ. ಧರ್ಮದ ಭಾವನೆಗೆ ಧಕ್ಕೆಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಆನೆ ಮರಳಿ ಪಡೆಯಲು ಹೋರಾಟ ನಡೆಸಲಾಗುವುದು.

| ಆಚಾರ್ಯ 108 ಗುಣಧರನಂದಿ ಮಹಾರಾಜರು