ಹಾಸನ : ಜನಿಸಿದ ಒಂದೇ ದಿನಕ್ಕೆ ಗಂಡು ಮಗುವನ್ನು ಮಾರಾಟ ಮಾಡಿರುವ ದೂರು ಕೇಳಿ ಬಂದ ಹಿನ್ನೆಲೆ ತಾಯಿ ಹಾಗೂ ಆಶಾ ಕಾರ್ಯಕರ್ತೆ ಸೇರಿ ಐವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹರಗರವಳ್ಳಿ ಗ್ರಾಮದಲ್ಲಿ ನಡೆದಿದೆ.
ಗಿರಿಜಾ ಹಾಗು ಆಕೆಯ ಪತಿ ಸೋಮಶೇಖರ್ ಇಬ್ಬರು ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದ ಸುಬ್ರಹ್ಮಣ್ಯ ಅವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2023 ನವೆಂಬರ್ 15 ರಂದು ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆಂದು ಮಗು ಹುಟ್ಟಿದ ಮರು ದಿನವೇ (ನ. 16 ರಂದು) ಚಿಕ್ಕಮಗಳೂರು ಮೂಲದ ಉಷಾ ಎಂಬುವರಿಗೆ ಮಗುವನ್ನು ಹಸ್ತಾಂತರಿದ್ದರು.
ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದರಿಂದ ಮೂರನೇಯ ಗಂಡು ಮಗುವನ್ನು ಕಾಫಿ ತೋಟದ ಮಾಲಿಕರಾದ ಸುಬ್ರಹ್ಮಣ್ಯ, ಶ್ರೀಕಾಂತ್ ಅವರು ತಮಗೆ ಗೊತ್ತಿರುವ ಚಿಕ್ಕಮಗಳೂರು ಮೂಲದ ಎಂಬುವರಿಗೆ ಮಾರಾಟ ಮಾಡಲು ಪ್ರೆರೇಪಿಸಿದ್ದರು. ಇದಕ್ಕೆ ಆಶಾ ಕಾರ್ಯಕರ್ತೆ ಸುಮಿತ್ರ ಕೂಡ ಸಹಕಾರ ನೀಡಿದ್ದರಿಂದ ಮಗುವನ್ನು ಹಸ್ತಾಂತರಿದ್ದರು.
ಆದರೆ, ಮಗುವನ್ನು ಅನಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದ ಹಿನ್ನೆಲೆಯಲ್ಲಿ, ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ ಪ್ರಕರಣವನ್ನು ಬಯಲಿಗೆಳೆದಿದೆ. ಜ.2 ರಂದು ಪರಿಶೀಲಿಸಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಘಟನೆ ಸಂಬಂಧ ಮಗುವಿನ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗೂ ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗೂ ಸುಬ್ರಹ್ಮಣ್ಯ ಎಂಬುವರನ್ನು ಬಂಧಿಸಲಾಗಿದೆ. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದಾಗಿ ತನಿಖೆ ವೇಳೆ ತಾಯಿ ಮಾಹಿತಿ ನೀಡಿದ್ದಾಳೆ.ಪ್ರಕರಣ ಸಂಬಂಧ ವಿಚಾರಣೆ ಮುಂದುವರಿದಿದ್ದು, ಮಗುವನ್ನು ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಅಧಿಕಾರಿಗಳು ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.
ತಾಯಿ ಸೇರಿ ಐವರ ಬಂಧನ:ಎಸ್‌ಪಿ
ಗಂಡು ಮಗು ಮಾರಾಟಕ್ಕೆ ಸಂಬಂದಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.3 ರಂದು ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ಅವರು ನೀಡಿದ ದೂರು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಗು ಜನಿಸಿದ್ದು ಈ ಮಗುವನ್ನು ಸುಬ್ರಹ್ಮಣ್ಯ ಮತ್ತು ಶ್ರೀಕಾಂತ್ ಎಂಬುವರು ಸೇರಿ ಉಷಾ ಎಂಬುವರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಆಶಾ ಕಾರ್ಯಕರ್ತೆ ಸುಮಿತ್ರಾ ಸಹಾಯ ಪಡೆದಿರುವುದಾಗಿ ಕಾಂತರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 16ರಂದು ಬೆಳಗಿನ ಜಾವ 5 ಗಂಟೆಗೆ ಮಗು ಮಾರಾಟ ಮಾಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ, ಪ್ರಾಥಮಿಕ ತನಿಖೆ ವೇಳೆ ಹಣಕಾಸಿನ ವಿಚಾರ ತಿಳಿದು ಬಂದಿಲ್ಲ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಐವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ಮಗು ಮಾರಾಟ ಪ್ರಕರಣ ಸಂಬಂಧ ತಾಯಿ ಮತ್ತು ಮಗುವಿನ ವೈದ್ಯಕೀಯ ತಪಾಸಣೆ ನಡೆಸಿ, ಮಕ್ಕಳ ಮಾರಾಟದ ಜಾಲದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ತೋಟದ ಮಾಲಿಕರಾದ ಸುಬ್ರಹಣ್ಯ ಮತ್ತು ಶ್ರೀಕಾಂತ್ ವಿರುದ್ಧ ದೌರ್ಜನ್ಯದ ಆರೋಪವೂ ಕೇಳಿ ಬಂದಿದ್ದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು. ತಾಯಿ ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆಯಿಂದಲೇ ಅನಧಿಕೃತ ಮಗು ಮಾರಾಟಕ್ಕೆ ಬೆಂಬಲ ನೀಡುವ ಮೂಲಕ ಕಾನೂನು ಉಲ್ಲಂಘನೆಯಾಗಿದೆ ಆಕೆ ಈ ಹಿಂದೆ ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಳೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಲಿದೆ ಎಂದು ತಿಳಿಸಿದರು.