ಜಿಲ್ಲೆ

ಗಂಡನ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ

ಕುಣಿಗಲ್​:- ಪಟ್ಟಣದ ಮಲ್ಲಾಘಟದಲ್ಲಿ ಶನಿವಾರ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ಈ ಕೃತ್ಯ ಮಾಡಿಕೊಂಡಿದ್ದಾಳೆಂದು ಶಂಕಿಸಲಾಗಿದೆ. ತಾಲೂಕು ಕೊತ್ತಗೆರೆ ಹೋಬಳಿ ಗಿಡದಪಾಳ್ಯದ ವಾಸಿ ಶ್ರೀನಿವಾಸಗೌಡ ಅವರ ಪುತ್ರಿ ವೀಣಾ(23) ಮೃತೆ. ತಾಲೂಕಿನ ಕಲ್ಲುಪಾಳ್ಯದ ವಾಸಿ ವಕೀಲ ನಾಗರಾಜು ಎಂಬುವವರು ವೀಣಾ ಅವರನ್ನು 3 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ 2 ವರ್ಷದ ಗಂಡು ಮಗು ಇದ್ದು, ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆಯುತಿತ್ತು ಎನ್ನಲಾಗಿದೆ. ಕಳೆದ ರಾತ್ರಿ ಕೂಡ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ದು, ಇದೇ ಕಾರಣಕ್ಕೆ ವೀಣಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮಗಳ ಅನುಮಾನಾಸ್ಪದ ಸಾವಿಗೆ ಗಂಡ ಹಾಗೂ ಮಾವ, ಅತ್ತೆ, ಮೂವರು ನಾದಿನಿಯರು ಕಾರಣ ಎಂದು ವೀಣಾ ಅವರ ತಂದೆ ಶ್ರೀನಿವಾಸಗೌಡ ಕುಣಿಗಲ್​ ಪೊಲೀಸ್​ ಠಾಣಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಂಡ ನಾಗರಾಜು ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಕೈಕೊಂಡಿದ್ದಾರೆ.