ಶ್ರೀರಂಗಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ನಿಮಿಷಾಂಬ ದೇವಸ್ಥಾನದ ಸಮೀಪ ಶನಿವಾರ ನೂತನವಾಗಿ ಪ್ರಾರಂಭಗೊಂಡ ನಮ್ಮ ಕ್ಲಿನಿಕ್ ಅನ್ನು ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು.
ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸ್ಥಳೀಯ ಜನರಿಗೆ ತ್ವರಿತವಾಗಿ ಉತ್ತಮ ಆರೋಗ್ಯ ಸಿಗುವ ಮೂಲಕ ಗುಣಮುಖರಾಗಲಿ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಆಧುನಿಕ ತಂತ್ರಜ್ಞಾನವುಳ್ಳ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಾಗೆಯೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇಂತಹ ಸ್ಥಳೀಯ ಕೇಂದ್ರಗಳು ಸಹಕಾರಿಯಾಗಲಿದ್ದು, ಸಾರ್ವಜನಿಕರು ಈ ಕ್ಲಿನಿಕ್‌ನ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಈ ನಮ್ಮ ಕ್ಲಿನಿಕ್‌ನಲ್ಲಿ ಗರ್ಭಿಣಿಯರು, ನವಜಾತ ಶಿಶುಗಳ ತಪಾಸಣೆ ಮತ್ತು ಆರೈಕೆ ಹಾಗೂ ಚಿಕಿತ್ಸೆ, ಹದಿಹರೆದವರ ಆರೋಗ್ಯದ ಕಾಳಜಿ, ಲಸಿಕೆ ಸೇವೆ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಸೋಂಕುಗಳ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ ಸೇರಿದಂತೆ 12 ರೀತಿಯ ವೈದ್ಯಕೀಯ ಸೇವೆಗಳೊಂದಿಗೆ 14 ಬಗೆಯ ಲ್ಯಾಬ್ ಟೆಸ್ಟ್‌ಗಳು, ಟೆಲಿ ಕನ್ಸಲ್ಟೇಷನ್ ಸೌಲಭ್ಯ, ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಲಹೆಗಳು ಉಚಿತವಾಗಿ ದೊರೆಯುತ್ತವೆ. ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಸಾಧ್ಯವಾಗುತ್ತದೆ. ಜತೆಗೆ ತಾಲೂಕು ಆಸ್ಪತ್ರೆಯ ಮೇಲಿರುವ ಒತ್ತಡವು ಕಡಿಮೆ ಆಗುತ್ತಿದೆ. ಆದ್ದರಿಂದ ಸಾರ್ವಜನಿಕರು ಕ್ಲಿನಿಕ್‌ನಲ್ಲಿ ಸಿಗುವ ಆರೋಗ್ಯ ಸೇವೆಗಳನ್ನು ಪಡೆಯಬೇಕೆಂದು ತಿಳಿಸಿದರು.
ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಎಂ.ಎನ್.ಆಶಾಲತಾ, ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಗಣೇಶ್ ಪ್ರಸಾದ, ಪುರಸಭಾ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಎಸ್.ಎನ್.ದಯಾನಂದ, ನರಸಿಂಹ ಗೌಡ, ಮಂಗಳಮ್ಮ, ನಿಂಗರಾಜು, ನಿರ್ಮಲಾ, ಎಸ್.ನಂದೀಶ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೋಮಸುಂದರ್, ಅನಿಲ್‌ಕುಮಾರ, ದೇವರಾಜು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.