ಧಾರವಾಡ: ಕೆ. ಕಲ್ಯಾಣ್ ಅವರ ಕುಟುಂಬ ಕಲಹಕ್ಕೆ ಕಾರಣಳಾದ ಗಂಗಾ ಕುಲಕರ್ಣಿ ಧಾರವಾಡದಲ್ಲೂ ತನ್ನ ಕರಾಮತ್ತು ತೋರಿಸಿರುವುದು ಬೆಳಕಿಗೆ ಬಂದಿದೆ. ಮಾಳಮಡ್ಡಿಯ ವಿಜಯಲಕ್ಷ್ಮೀ ಧಾರವಾಡಕರ ಎಂಬುವರು ಆಕೆಯ ವೃತ್ತಾಂತವನ್ನು ಬಿಚ್ಚಿಟ್ಟಿದ್ದಾರೆ.
ಗಂಗಾ ಕುಲಕರ್ಣಿ ನಿಜ ಹೆಸರು ಜ್ಯೋತಿ ಕುಲಕರ್ಣಿ. 2016-17ರಲ್ಲಿ ತನ್ನ ಪತಿ ರಾಜೇಂದ್ರ ಅವರನ್ನು ಭೇಟಿಯಾಗಿ ಮೊಸಳೆ ಕಣ್ಣೀರು ಹಾಕಿದ್ದಳು. ಅದಕ್ಕೆ ಸ್ಪಂದಿಸಿದ್ದ ರಾಜೇಂದ್ರ, ಜ್ಯೋತಿಯನ್ನು ತಮ್ಮ ಮನೆಗೆಲಸಕ್ಕೆ ಇಟ್ಟುಕೊಂಡಿದ್ದರು. ಸಹಾಯ ಮನೋಭಾವವನ್ನು ದುರ್ಬಳಕೆ ಮಾಡಿಕೊಂಡ ಜ್ಯೋತಿ, ಶಿವಾನಂದ ವಾಲಿ ಎಂಬಾತನೊಂದಿಗೆ ಸೇರಿ, ರಾಜೇಂದ್ರಗೆ ಮಾಟ- ಮಂತ್ರ, ವಶೀಕರಣ ಮಾಡಿ ಸಾವಿಗೆ ಕಾರಣಳಾಗಿದ್ದಾಳೆ. ಇದಕ್ಕೆ ಬೆಂಗಳೂರಿನ ನೇತ್ರಾ ಅಯ್ಯರ್ ಎಂಬಾಕೆ ಸೂತ್ರಧಾರಳಾಗಿದ್ದಾಳೆ. ಬಾಗಲಕೋಟೆಯ ನವನಗರದದ ಜ್ಯೋತಿ, ಇದೇ ರೀತಿ ಹಲವರಿಗೆ ಕೆಲಸ ಕೊಡಿಸುವುದಾಗಿಯೂ ನಂಬಿಸಿ ಮೋಸ ಮಾಡಿ ಜೈಲುವಾಸ ಅನುಭವಿಸಿ ಬಂದಿದ್ದಾಳೆ ಎಂದು ವಿಜಯಲಕ್ಷ್ಮೀ ಧಾರವಾಡಕರ ಮಾಧ್ಯಮದವರೊಂದಿಗೆ ಮಾತನಾಡುತ್ತ ಆರೋಪಿಸಿದ್ದಾರೆ.
ನಗರದ ಮಾಳಮಡ್ಡಿಯಲ್ಲಿ ಶ್ರೀ ಸಾಯಿ ಕೌಟುಂಬಿಕ ಸಲಹಾ ಕೇಂದ್ರ ನಡೆಸುತ್ತಿರುವ ವಿಜಯಲಕ್ಷ್ಮೀ ಧಾರವಾಡಕರಗೆ ತನ್ನ ಪತಿಯನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂಬ ಅಳುಕಿದೆ. ಜ್ಯೋತಿ ತಮ್ಮ ಮನೆಗೆ ಬಂದ 6 ತಿಂಗಳಲ್ಲೇ ಮಾಟ- ಮಂತ್ರದಿಂದ ಕುಟುಂಬದಲ್ಲಿ ವೈಮನಸ್ಸು ಉಂಟು ಮಾಡಿದ್ದಳು. ಜ್ಯೋತಿ ಉರ್ಫ್ ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಸೇರಿ ಹಲವಾರು ಕುಟುಂಬಗಳನ್ನು ಹಾಳು ಮಾಡಿದ್ದು, ಇಬ್ಬರಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ವಿಜಯಲಕ್ಷ್ಮೀ ಆಗ್ರಹಿಸಿದ್ದಾರೆ.
ಸರಿಯಾದ ಸಾಕ್ಷಿ ಇಲ್ಲದ್ದರಿಂದ ರಾಜೇಂದ್ರ ಕೊಲೆ ಪ್ರಕರಣದಲ್ಲಿ ತಾನು ಜ್ಯೋತಿ ಕುಲಕರ್ಣಿ ವಿರುದ್ಧ ಪೊಲೀಸ್ ದೂರು ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.