ಜಿಲ್ಲೆ

ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ!

ಹುಕ್ಕೇರಿ: ಹುಕ್ಕೇರಿ ಮತ್ತು ಸಂಕೇಶ್ವರ ಉಪನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಖೊಟ್ಟಿ ದಾಖಲೆ ಸಲ್ಲಿಸಿ ಪ್ರತ್ಯೇಕ ಎರಡು ಆಸ್ತಿ ಖರೀದಿಸಿ ಮಾರಾಟ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ಪ್ರಕರಣ ಪರಿಶೀಲಿಸಿದ ಘಟನೆ ನಡೆದಿದೆ.

ಗುರುವಾರ ಉಪನೋಂದಣಾಧಿಕಾರಿಗಳ ಕಚೇರಿಗೆ ದೂರುದಾರರೊಂದಿಗೆ ಆಗಮಿಸಿದ ಲೋಕಾಯುಕ್ತ ನ್ಯಾಯಾಧೀಶ ರಾಮನಾಥ ಚವ್ಹಾಣ, ಖೊಟ್ಟಿ ದಾಖಲೆಗಳ ಮೂಲಕ ನಡೆದ ಖರೀದಿ ಪ್ರಕ್ರಿಯೆ ಮಾಹಿತಿ ಪಡೆದ ಬಳಿಕ ಮಾತನಾಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹುಕ್ಕೇರಿ ತಾಲೂಕುಮಟ್ಟದ ತಹಸೀಲ್ದಾರ್ ಕಚೇರಿ, ಸಬ್‌ರಿಜಿಸ್ಟ್ರಾರ್, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಬಿ.ಎ.ಬಿರಾದಾರ, ಬೆಂಗಳೂರು ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಅಮರೇಶ ಜಯಕರ, ಉಪನೋಂದಣಾಧಿಕಾರಿ ಮಹೇಶ ಬಾನಿಮಠ, ಪ್ರಕಾಶ ಮೈಲಾಖೆ ಇತರರಿದ್ದರು.

ಪ್ರಕರಣದ ಹಿನ್ನೆಲೆ: ತಾಲೂಕಿನ ಕುರಣಿ ಗ್ರಾಮದ ದುಂಡಪ್ಪ ಕುದನೂರಿ ಜಮೀನನ್ನು ಅದೇ ಗ್ರಾಮದ ಶಿವರುದ್ರ ಕುದನೂರಿ, ದುಂಡಪ್ಪ ಕುದನೂರಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಂಕೇಶ್ವರ ಉಪ ನೋಂದಣಿ ಕಚೇರಿಯಲ್ಲಿ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದ ಗುರುಸಿದ್ದ ಮಡಿವಾಳ ಅವರಿಗೆ ಮಾರಾಟ ಮಾಡಿದ್ದ. ಇದಕ್ಕೆ ಸಾಕ್ಷಿಯಾಗಿ ನೊಗನಿಹಾಳದ ದಸ್ತಗೀರ ಮಕಾನದಾರ ಮತ್ತು ಆನಂದ ಕುಂಬಾರ ಸಹಿ ಮಾಡಿದ್ದರು. ಜಮೀನಿನ ಪಹಣಿ ಪಡೆಯಲು ಹೋದಾಗ ಈ ವಿಷಯ ಬೆಳಕಿಗೆ ಬಂದ ಮೇಲೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದುಂಡಪ್ಪ ದೂರು ನೀಡಿದ್ದರು.

ಕುರಣಿ ಗ್ರಾಮದ ಮಹಾದೇವಿ ಶಿವಪುತ್ರಯ್ಯ ಹಿರೇಮಠ ಜಮೀನನ್ನು ಖೊಟ್ಟಿ ದಾಖಲೆ ಸಲ್ಲಿಸಿ ಪರಭಾರೆ ಮಾಡಲಾಗಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಉಪನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.