ಚಿತ್ರದುರ್ಗ: ಖೇಲೋ ಇಂಡಿಯಾ ಯೋಜನೆಯಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಕೋರಿ ಸಂಸದ ಗೋವಿಂದ ಎಂ. ಕಾರಜೋಳ ಹೊಸದಿಲ್ಲಿಯಲ್ಲಿ ಶುಕ್ರವಾರ ಕೇಂದ್ರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿದರು.
ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಹಾಗೂ ಸಿಂಥೆಟಿಕ್ ಫುಟ್‌ಬಾಲ್ ಟ್ರಾೃಕ್ ನಿರ್ಮಾಣಕ್ಕೆ 27 ಕೋಟಿ ರೂ., ಹೊಳಲ್ಕೆರೆ ತಾಲೂಕು ಕ್ರೀಡಾಂಗಣದಲ್ಲಿ ಮೂಲಸೌಲಭ್ಯ ಒದಗಿಸಲು 18 ಕೋಟಿ ರೂ.,ಹಿರಿಯೂರು ತಾಲೂಕು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಸಿಂಥೆಟಿಕ್ ಟ್ರಾೃಕ್ ಹಾಗೂ ಈಜುಕೊಳ ನಿರ್ಮಾಣ, ಚಳ್ಳಕೆರೆ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ನಿರ್ಮಾಣ ಸೇರಿ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಗ್ರಹಿಸಿ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ಅನುದಾನದೊಂದಿಗೆ ಅನುಮೋದನೆ ನೀಡುವಂತೆ ಸಂಸದರು ಮನವಿ ಮಾಡಿದ್ದಾರೆ.