ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಕರ್ನಾಟಕ ವುಶು ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿದರು.  
ಜಿಲ್ಲೆ

ಖೇಲೋ ಇಂಡಿಯಾ ದಕ್ಷಿಣ ಭಾರತ ಮಹಿಳಾ ವುಶು ಕ್ರೀಡಾಕೂಟ

ಬಾಗಲಕೋಟೆ: ಭಾರತೀಯ ವುಶು ಸಂಸ್ಥೆ ನೇತೃತ್ವದಲ್ಲಿ ಕರ್ನಾಟಕ ವುಶು ಸಂಸ್ಥೆ, ಬಿವಿವಿ ಸಂಘ ಜಂಟಿಯಾಗಿ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜು ಆವರಣ, ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ದಕ್ಷಿಣ ವಲಯ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳೆಯರ ಕ್ರೀಡಾಕೂಟ ಜೂ.೧೦ ರಿಂದ ೧೩ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಕರ್ನಾಟಕ ವುಶು ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟವನ್ನು ಜೂ.೧೦ ಸಂಜೆ ೪.೩೦ ಗಂಟೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಉದ್ಘಾಟಿಸಲಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಡಾ.ಮೀನಾ ಚಂದಾವರಕರ, ಭಾರತೀಯ ವುಶು ಸಂಸ್ಥೆಯ ಸಿಇಒ ಸುಹೇಲ್ ಅಹಮದ್, ತೋವಿವಿ ಕಲಪತಿ ಡಾ.ವೀಷ್ಣು ವರ್ಧನ, ಕ್ರೀಡಾಕೂಟದ ಅಧಿಕಾರಿ ಕಿಶನ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ಓರಿಸ್ಸಾ, ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರಿ ಈ ಎಲ್ಲ ದಕ್ಷಿಣ ರಾಜ್ಯಗಳಿಂದ ೪೦೦ ಕ್ರೀಡಾಪಟುಗಳು ಭಾಗವಹಿಸುವರು. ವಿಜೇತ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ನಗದು ಬಹುಮಾನವಾಗಿ ೭ ಲಕ್ಷ ೨೦ ಸಾವಿರ ರೂ.ನೇರವಾಗಿ ಅವರ ಬ್ಯಾಂಕ ಖಾತೆಗೆ ಜಮಾ ಮಾಡ ಲಾಗುವುದು. ಜೊತೆಗೆ ಪ್ರಶಸ್ತಿ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕ್ರೀಡಾಸಕ್ತರು ಕ್ರೀಡಾಕೂಟಕ್ಕೆ ಆಗಮಿಸಿ ಪಂದ್ಯಗಳನ್ನು ವೀಕ್ಷಿಸಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಲು ಮತ್ತು ಆಗಮಿಸಲಿರುವ ಭಾರತೀಯ ವುಶು ಸಂಸ್ಥೆ ಯ ಅಧಿಕಾರಿ ವರ್ಗದವರ, ಕ್ರೀಡಾ ಪಟುಗಳ ಉಸ್ತುವಾರಿಗಾಗಿ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ವಸತಿ, ಆಹಾರ, ಸಾರಿಗೆ, ಮಾಧ್ಯಮ, ವೈದ್ಯಕೀಯ, ಕ್ರೀಡಾಂಗಣದ ಉಸ್ತುವಾರಿ ಅಂತಹ ಹಲವು ಸಮಿತಿಗಳನ್ನು ರಚಿಸಲಾಗಿದ್ದು ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಲು ಎಲ್ಲ ಸಮಿತಿಗಳು ಈಗಾಗಲೇ ಕಾರ್ಯನಿರತವಾಗಿವೆ ಎಂದು ಹೇಳಿದರು.

ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಜ್ಯೂನಿಯರ್ ವುಶು ತಂಡದ ಆಯ್ಕೆಯ ಪ್ರಕ್ರಿಯೆಯನ್ನು ಜೂ.೧೪ ರಿಂದ ೧೫ರ ವರೆಗೆ ವಿದ್ಯಾಗಿರಿಯ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸೆ.೨೨ ರಿಂದ ೩೦ರವರೆಗೆ ಬ್ರೂನಿ ದೇಶದಲ್ಲಿ ಆಯೋಜಿಸಲಾಗಿರುವ ೯ನೇ ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗಿಯಾಗುವ ಭಾರತೀಯ ಜ್ಯೂನಿಯರ್ ವುಶು ತಂಡ ವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಥಮ ಬಾರಿಗೆ ಬಾಗಲಕೋಟೆಯಲ್ಲಿ ನಡೆಯುತ್ತಿರು ವುದು ನಗರಕ್ಕೆ ಮತ್ತು ಬಿವಿವಿ ಸಂಘಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ೨೦೦ ವುಶು ಕ್ರೀಡಾಪಟುಗಳು ಭಾಗವಹಿಸಲಿರುವರು. ಭಾರತೀಯ ವುಶು ತಾಂತ್ರಿಕ ಸಮಿತಿಯು ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಯ್ಕೆ ಮಾಡಲಿದೆ. ಈ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವುಶು. ಕ್ರೀಡಾಪುಟಗಳ ಜೊತೆಗೆ ಭಾರತೀಯ ವುಶು ಪ್ರಾಽಕಾರದ ಅಧಿಕಾರ ವರ್ಗದವರು, ರೆಫರಿಗಳು ಹಾಗೂ ಇನ್ನಿತರ ವಿಷಯ ಪರಿಣಿತರು ಆಗಮಿಸಲಿದ್ದಾರೆ ಎಂದು ಹೇಳಿದರು.

ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಅಶೋಕ ಸಜ್ಜನ (ಬೇವೂರ), ಸಿಇಒ ಸೊಹೇಲ್ ಅಹಮದ್, ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ, ರಾಜು ನಾಯ್ಕರ್, ಸಂಗಮೇಶ ಲಾಯದಗುಂದಿ, ಆರ್.ಎಂ. ಹಿರೇಮಠ ಮತ್ತಿತರರು ಇದ್ದರು.