ಕಮಲನಗರ ತಾಲೂಕಿನ ಖೇಡ್ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀ ರೇವಪ್ಪಯ್ಯ ಸ್ವಾಮೀಜಿ ಜಾತ್ರೋತ್ಸವದಲ್ಲಲಿ ಭಕ್ತರಿಗೆ ಶಾಸಕ ಪ್ರಭು ಚವ್ಹಾಣ್ ಹೋಳಿಗೆ-ತುಪ್ಪ ಉಣಬಡಿಸಿದರು. 
ಜಿಲ್ಲೆ

ಖೇಡ್‌ನಲ್ಲಿ ಹೋಳಿಗೆ ತುಪ್ಪದ್ದೇ ವಿಶಿಷ್ಟ ಜಾತ್ರೆ

ಕಮಲನಗರ: ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ್ಯ. ಆದರೆ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಖೇಡ್ ಗ್ರಾಮದಲ್ಲಿ ಮಂಗಳವಾರ ಸೋಮಲಿಂಗೇಶ್ವರ ಜಪಯಜ್ಞ ಮಹೋತ್ಸವ ಮತ್ತು ನಾವದಗಿಯ ಶ್ರೀ ರೇವಪ್ಪಯ್ಯ ಸ್ವಾಮೀಜಿ ಗುರುಪೂಜೆ ನಿಮಿತ್ತ ಹೋಳಿಗೆ-ತಪ್ಪದ್ದೇ ಜಾತ್ರೆ ನಡೆದಿದ್ದು ವಿಶೇಷ.

೨೦ ವರ್ಷಗಳಿಂದ ಕಾರಹುಣ್ಣಿಮೆಯ ಆರನೇ ದಿನಕ್ಕೆ ಖೇಡ್‌ನಲ್ಲಿ ಈ ದಾಸೋಹ ನಿಮಿತ್ತ ಹೋಳಿಗೆ-ತುಪ್ಪದ ಜಾತ್ರೆ ನಡೆದುಕೊಂಡು ಬಂದಿದೆ. ಕರ್ನಾಟಕವಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣಗಳಿಂದ ಆಗಮಿಸುವ ಸಹಸ್ರಾರು ಭಕ್ತರಿಗೆ ಬೆಳಗ್ಗೆಯಿಂದ ಸಂಜೆವರೆಗೆ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಪಡಿಸುತ್ತಾರೆ ಖೇಡ್ ಗ್ರಾಮಸ್ಥರು.

ದಾಸೋಹಕ್ಕೆ ಹೈದರಾಬಾದ್‌ನಿಂದ ೧೫ ಕೆಜಿಯ ೪೫ ಡಬ್ಬಿ ತುಪ್ಪ ಅಂದರೆ ೬೭೫ ಕೆಜಿ, ೬೫೦ ಕೆಜಿ ಕಡಲೆ ಬೇಳೆ, ೮೦೦ ಕೆಜಿ ಸಕ್ಕರೆ ಹಾಗೂ ೧೪ ಕ್ವಿಂಟಾಲ್ ಅಕ್ಕಿ, ೯ ಕ್ವಿಂ. ಗೋಧಿಯನ್ನು ದಾಸೋಹಕ್ಕಾಗಿ ತಂದಿದ್ದೇವೆ. ಶ್ರೀ ರೇವಪ್ಪಯ್ಯ ಸ್ವಾಮೀಜಿ ಮೇಲಿರುವ ಭಕ್ತಿ ಕಾರಣಕ್ಕೆ ಜನಸಮೂಹವೇ ಗ್ರಾಮದೆಡೆಗೆ ಧಾವಿಸಿ ಪ್ರಸಾದ ಸೇವಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಖೇಡ್‌ನಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಂಡು ಹೋದ ಹೆಣ್ಮಕ್ಕಳು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೆ ಈ ಜಾತ್ರೆಗೆ ಬಂದಿದ್ದರಿಂದ ಇಡೀ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಸುಮಾರು ೨೫ ಸಾವಿರ ಭಕ್ತಾದಿಗಳು ಸೇರಿದ್ದರು. ಎಲ್ಲೆಂದರಲ್ಲಿ ಜನಸಾಗರ, ಸಂಗಮದಿಂದ ಖೇಡ್ ರಸ್ತೆಯುದ್ದಕ್ಕೂ ಜೀಪ್, ಟಂಟಂ, ಟೆಂಪೋ, ಮೋಟಾರ್ ಸೈಕಲ್, ಕಾರುಗಳ ಸಂಚಾರ ವ್ಯಾಪಕ ಇದ್ದುದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಹರಸಾಹಸ ಪಟ್ಟು ಸಂಚಾರ ಸುಗಮಗೊಳಿಸಲು ಶ್ರಮಿಸುತ್ತಿರುವುದು ಕಂಡು ಬಂತು. ವಿಭೂತಿ, ರುದ್ರಾಕ್ಷಿ, ತೆಂಗು ಹಾಗೂ ಮಕ್ಕಳ ಆಟಿಕೆ ಸಾಮಗ್ರಿ ಅಂಗಡಿಗಳು ಜನರಿಂದ ತುಂಬಿದ್ದವು.

ಜಾತ್ರೆಗೂ ಮೊದಲು ಐದು ದಿನ ತಡೋಳಾ-ಮೇಹಕರ್ ಮಠದ ಶ್ರೀ ಡಾ.ರಾಜೇಶ್ವರ ಶಿವಾಚಾರ್ಯರು ಬೆಳಗ್ಗೆ ಇಷ್ಟಲಿಂಗ ಪೂಜೆ, ಜಪ-ಧ್ಯಾನ ಕುರಿತು ಪ್ರಶಿಕ್ಷಣ ಹಾಗೂ ಸಂಜೆ ಪ್ರವಚನ ನೀಡಿದರು. ಮಹಾತಪಸ್ವಿ ಶ್ರೀ ರೇವಪ್ಪಯ್ಯ ಸ್ವಾಮೀಜಿ ದಾಸೋಹ ಕಾರ್ಯವನ್ನು ೨೦ ವರ್ಷಗಳಿಂದ ಖೇಡ್ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ತಪಸ್ಸಿನ ಸ್ಥಳದಲ್ಲೇ ಭವ್ಯ ಪ್ರತಿಮೆ ಸ್ಥಾಪನೆ: ಭಾಲ್ಕಿ ತಾಲೂಕಿನ ನಾವದಗಿಯ ರೇವಪ್ಪಯ್ಯನವರು ಖೇಡ್‌ನಲ್ಲಿ ತಪಸ್ಸು ಮಾಡಿದ ಸ್ಥಳದಲ್ಲೇ ಗ್ರಾಮಸ್ಥರು ಅವರ ಭವ್ಯ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ನಾವದಗಿ ರೇವಪ್ಪಯ್ಯ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆ ಸಂಸ್ಕಾರ ನೀಡುತ್ತ ಗ್ರಾಮ ಗ್ರಾಮಗಳಲ್ಲಿ ಹೋಳಿಗೆ-ತುಪ್ಪದ ದಾಸೋಹ ಮಾಡಿಸುತ್ತಿದ್ದರು. ಒಮ್ಮೆ ಪೂಜ್ಯರ ಸಮ್ಮುಖದಲ್ಲಿ ಈ ಬಿನ್ನಹ ಜಾತ್ರೆಗೆ ತುಪ್ಪ ಕಡಿಮೆ ಬಿದ್ದಾಗ ಅಲ್ಲೇ ಇದ್ದ ತೆರೆದ ಬಾವಿ ನೀರನ್ನು ತುಪ್ಪವಾಗಿ ಪರಿವರ್ತಿಸಿ ಭಕ್ತರಿಗೆ ಉಣಬಡಿಸಿದ್ದರು ಎಂಬ ಪ್ರತೀತಿ ಇದೆ. ಹೀಗಾಗಿ ಪೂಜ್ಯರ ಈ ಪವಾಡದಿಂದ ಜಾತ್ರೆಯಲ್ಲಿ ಹೋಳಿಗೆ-ತುಪ್ಪದ ಊಟದ ಪರಂಪರೆ ಮುಂದುವರಿದಿದೆ. ಅಲ್ಲದೆ ಈ ಜಾತ್ರೆಯಲ್ಲಿ ಊಟ ಮಾಡಿದವರಿಗೆ ಯಾವುದೇ ರೋಗ ಬರುವುದಿಲ್ಲ ಎನ್ನಲಾಗುತ್ತದೆ.

ಈ ಜಾತ್ರೆಯಲ್ಲಿ ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಳ್ಳುತ್ತಾರೆ. ಗ್ರಾಮೀಣ ಭಾಗದ ಸಂಸ್ಕೃತಿ ಪ್ರತೀಕವೇ ಹೋಳಿಗೆ-ತುಪ್ಪದ ಜಾತ್ರೆ. ಶ್ರೀ ರೇವಪ್ಪಯ್ಯ ಸ್ವಾಮೀಜಿ ಭಕ್ತರು ಕಾಯಕ ಮತ್ತು ದಾಸೋಹವನ್ನು ಜೀವನದುದ್ದಕ್ಕೂ ಪಾಲಿಸಬೇಕು.

| ಶ್ರೀ ಡಾ.ರಾಜೇಶ್ವರ ಶಿವಾಚಾರ್ಯ ಮೇಹಕರ್-ತಡೋಳಾ ಮಠ

ಶ್ರೀ ರೇವಪ್ಪಯ್ಯ ಸ್ವಾಮೀಜಿ ಮಹಿಮೆ ಅಪಾರ. ನಾನು ಅವರ ಪರಮ ಭಕ್ತ. ಇಲ್ಲಿ ಬೇಡಿಕೊಂಡ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿವರ್ಷ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕನುಗುಣ ಮಂದಿರ ಪರಿಸರದಲ್ಲಿ ಶೆಡ್ ನಿರ್ಮಾಣ ಇತರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮಂದಿರ ಹಾಗೂ ಖೇಡ್ ಗ್ರಾಮದ ಸಮಗ್ರ ಪ್ರಗತಿಗೆ ಮುಂದಿನ ದಿನಗಳಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ಪಟ್ಟಿ ನೀಡಿದರೆ ಹಂತ ಹಂತವಾಗಿ ಮಾಡಿಕೊಡುತ್ತೇನೆ.

| ಪ್ರಭು ಚವ್ಹಾಣ್ ಶಾಸಕ ಔರಾದ್