ಜಿಲ್ಲೆ

ಖುಷಿ ತಂದ ಪಪ್ಪಾಯ ಕೃಷಿ

ರೋಣ: ಬೇಸಾಯವನ್ನು ಎಲ್ಲರೂ ಮಾಡುತ್ತಾರೆ. ಆದರೆ, ಅದನ್ನು ಬುದ್ಧಿವಂತಿಕೆಯಿಂದ ಲಾಭದಾಯಕವಾಗಿ ಮಾಡುವವರು ತೀರಾ ಕಡಿಮೆ. ಈ ನಿಟ್ಟಿನಲ್ಲಿ ತಾಲೂಕಿನ ಮುದೇನಗುಡಿ ಗ್ರಾಮದ ರೈತ ಮಹಾನಂದೀಶ ಉಳ್ಳಾಗಡ್ಡಿ ಅವರ ಶ್ರಮ, ಸಾಧನೆ, ಆದರ್ಶ ಯುವ ಕೃಷಿಕರಿಗೆ ಮಾದರಿಯಾಗಿದೆ.

ಮಹಾನಂದೀಶ ಅವರು ಮೂರು ಎಕರೆ ಜಮೀನು. ಅದರಲ್ಲಿ ಕೊಳವೆ ಬಾವಿ ಇದೆ. ಹನಿ ನೀರಾವರಿ ಅಳವಡಿಸಿಕೊಂಡು ಸಮಯ ಹಾಗೂ ಜಾಗದ ಸದ್ಭಳಕೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗ ಮಾಡುತ್ತಲೇ ಇರುವುದು ಇವರ ತುಡಿತ.

ಈ ಹಿಂದೆ ಶೇಂಗಾ, ಗೋವಿನಜೋಳ, ಕಡಲೆ, ಹೆಸರು ಬೆಳೆಯುತ್ತಿದ್ದ ಇವರು, ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಧನ ಪಡೆದು ಮೂರು ಎಕರೆಯಲ್ಲಿ ಮೂರು ಸಾವಿರ ಪಪ್ಪಾಯ ಬೆಳೆದಿದ್ದಾರೆ. ಮಹಾರಾಷ್ಟ್ರದಿಂದ 13 ರೂಪಾಯಿಗೆ ಒಂದರಂತೆ 39 ಸಾವಿರ ರೂಪಾಯಿ ವ್ಯಯಿಸಿ 3 ಸಾವಿರ ಸಸಿ ತಂದು ನಾಟಿ ಮಾಡಿದ್ದಾರೆ. 2ಗಿ2 ಗುಂಡಿ ತೋಡಿ ಒಂದು ಸಾಲಿನಲ್ಲಿ 10 ಅಡಿಗೆ ಒಂದರಂತೆ ನಾಟಿ ಮಾಡಿದ್ದಾರೆ. ಎರಡು ಸಾಲುಗಳ ಮಧ್ಯೆ 6 ಅಡಿ ಜಾಗ ಬಿಟ್ಟಿದ್ದಾರೆ. ಪ್ರತಿಯೊಂದು ಸಸಿಗೂ ಹನಿ ನೀರಾವರಿ ಅಳವಡಿಸಿದ್ದಾರೆ. ಪ್ರತಿ ಗಿಡವು ತನ್ನ ಜೀವಿತಾವಧಿಯ 2 ವರ್ಷಗಳಲ್ಲಿ 30 ರಿಂದ 40 ಕೆಜಿ ಹಣ್ಣು ನೀಡುತ್ತಿದೆ. ಸದ್ಯಕ್ಕೆ ಗದಗ ವ್ಯಾಪಾರಸ್ಥರು, ಖರೀದಿದಾರರು ತೋಟಕ್ಕೆ ಆಗಮಿಸಿ ಕೆಜಿಗೆ 8 ರೂಪಾಯಿಯಂತೆ ಖರೀದಿಸುತ್ತಾರೆ. ಹೀಗಾಗಿ ಪಪ್ಪಾಯ ಸಾಗಣೆ ಖರ್ಚು ಉಳಿಯುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಪಪ್ಪಾಯ ಸಸಿ ತರಲು, ಗುಂಡಿ ನೆಡುವುದಕ್ಕೆ 80 ಸಾವಿರ ರೂಪಾಯಿ ನೀಡಿದ್ದಾರೆ. ಸಸಿ ತರುವುದು ಹಾಗೂ ಗುಂಡಿ ತೋಡಿ ನೆಡುವುದು ಸೇರಿ 1 ಲಕ್ಷ ರೂಪಾಯಿ ಖರ್ಚಾಗಿದೆ. 11 ತಿಂಗಳುಗಳ ಹಿಂದೆ ಸಸಿಗಳನ್ನು ನಾಟಿ ಮಾಡಿದ್ದೇವೆ. 9ನೇ ತಿಂಗಳಿಗೆ ಮೊದಲನೇ ಬೆಳೆ ಕಟಾವಿಗೆ ಬಂದಿದ್ದು ಇದರಿಂದ 2 ಲಕ್ಷ ರೂಪಾಯಿ ಆದಾಯ ಬಂದಿದೆ. ಈಗ 2 ನೇ ಬಾರಿ ಹಣ್ಣು ಕಟಾವಿಗೆ ಬಂದಿದ್ದು, 4 ಲಕ್ಷ ರೂಪಾಯಿಗಳ ಆದಾಯ ಕೈ ಸೇರುವ ನಿರೀಕ್ಷೆ ಇದೆ. ಅದೇ ರೀತಿ 3 ನೇ ಮತ್ತು 4 ನೇ ಕಟಾವು ಬಂದರೆ ಹಣದ ಹೊಳೆ ಹರಿಯಲಿದೆ ಎಂದು ಖುಷಿಯಿಂದ ಹೇಳುತ್ತಾರೆ ಮಹಾನಂದೀಶ.

ಹನಿ ನೀರಾವರಿ ಅಳವಡಿಸಿದ್ದರಿಂದ ನೀರು ಹಾಯಿಸುವ ಶ್ರಮವಿಲ್ಲ. ಭೂಮಿ ಸಿದ್ಧ್ದೆ, ಸಸಿ ನಾಟಿ ಮಾಡುವುದು, ಗೊಬ್ಬರ, ಬೇಸಾಯ ಕ್ರಮ ಹಾಗೂ ಕಾಲಕಾಲಕ್ಕೆ ಕೃಷಿ ತಜ್ಞರ ಸಲಹೆ ಪಡೆದು ತೋಟವನ್ನು ಜೋಪಾನ ಮಾಡಿಕೊಂಡಿದ್ದಾರೆ. ಕರೊನಾ ಸಂಕಷ್ಟದಲ್ಲಿ ಇಡೀ ಕುಟುಂಬದ ಸದಸ್ಯರೊಂದಿಗೆ ತೋಟದಲ್ಲಿ ಮನೆ ಮಾಡಿಕೊಂಡು ಶ್ರಮವಹಿಸಿ ದುಡಿದಿದ್ದಾರೆ. ಅದರ ಪ್ರತಿಫಲವಾಗಿ ಮೂರು ಎಕರೆಯಲ್ಲಿ ಸಮೃದ್ಧ ಪಪ್ಪಾಯ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಸಕಾಲಕ್ಕೆ ನೀರು, ರೋಗ ನಿಯಂತ್ರಣಕ್ಕೆ ಸಾವಯವ ಗೊಬ್ಬರ ಹಾಕಿದ ಕಾರಣ ಉತ್ತಮ ಫಸಲು ದೊರೆತಿದೆ.

ನಾವು ನೆಟ್ಟಿರುವ ರೇಡ್​ಲೇಡಿ ಪಪ್ಪಾಯ ಗಿಡಗಳು ಮೂರು ವರ್ಷ ಕಾಯಿ ಬಿಡುತ್ತವೆ. ಸಾಮಾನ್ಯವಾಗಿ ಎರಡನೇ ವರ್ಷದ ನಂತರ ಇಳುವರಿ ಕಡಿಮೆಯಾಗುತ್ತದೆ. ರೆಡ್​ಲೇಡಿ ತಳಿಗಳು ಹೆಚ್ಚು ಸಿಹಿಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ, ಕೊಯ್ಲಾದ ನಂತರ 8 ರಿಂದ 10 ದಿನಗಳ ವರೆಗೆ ಇಟ್ಟರೂ ಹಣ್ಣುಗಳು ಹಾಳಾಗುವುದಿಲ್ಲ. ಪಪ್ಪಾಯ ಸಸಿಗಳಿಗೆ ಯಾವುದೇ ಕ್ರಿಮಿನಾಶಕ ಗೊಬ್ಬರ ಹಾಕುವುದಿಲ್ಲ. ಬದಲಿಗೆ ಸಾವಯವ ಜೀವಾಮೃತ, ಗೋಕೃಪಾಮೃತ, ಒಳ್ಳೆಣ್ಣಿ ಹಾಗೂ ನಾಟಿ ಕೋಳಿ ತತ್ತಿಯನ್ನು ಬಳಕೆ ಮಾಡುತ್ತೇವೆ.| ಮಹಾನಂದೀಶ ಉಳ್ಳಾಗಡ್ಡಿ ಪಪ್ಪಾಯ ಬೆಳೆಗಾರ
ಈ ಹಿಂದೆ ಮಹಾನಂದೀಶ ಉಳ್ಳಾಗಡ್ಡಿ ಅವರು, ತಮ್ಮ ಜಮೀನಿನಲ್ಲಿ ಶೇಂಗಾ, ಕಡಲೆ, ಗೋವಿನಜೋಳ ಬೆಳೆಯುತ್ತಿದ್ದರು. ಅದು ಲಾಭದಾಯಕ ಎನಿಸದಿದ್ದಾಗ, ಪಪ್ಪಾಯ ಬೆಳೆದರು. ಅದೃಷ್ಟಕ್ಕೆ ಅವರು ಬೆಳೆದಿರುವ ಒಂದೊಂದು ಹಣ್ಣು ಒಂದರಿಂದ ಎರಡು ಕೆಜಿ ತೂಕ ಹೊಂದಿವೆ. ಇದು ರೈತ ಖುಷಿ ಇಮ್ಮಡಿಗೊಳಿಸಿದೆ. ಅಲ್ಲದೆ, ಲಕ್ಷ ಲಕ್ಷ ಸಂಪಾದನೆಯ ನಿರೀಕ್ಷೆಯಲ್ಲಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನ ದೊರೆತಿದ್ದು ಉಪಯುಕ್ತವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯ ಗಳನ್ನು ಬಳಸಿಕೊಂಡು ರೈತರು ಹೆಚ್ಚೆಚ್ಚು ಸಾಧನೆ ಮಾಡಬೇಕು.| ಎಂ.ಬಿ. ತಾಂಭೋಟಿತೋಟಗಾರಿಕೆ ಇಲಾಖೆಯ ಅಧಿಕಾರಿ ರೋಣ