ಚಿತ್ರದುರ್ಗ: ಆಪ್ತ ಸಮಾಲೋಚನೆ ಮೂಲಕ ಖಿನ್ನತೆ ಹಾಗೂ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಮಾಹಿತಿ, ಶಿಕ್ಷಣ-ಸಂವಹನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ಮೂಲಕ ಆತ್ಮಹತ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ. ಸಂಶೋಧನೆ ಪ್ರಕಾರ ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.
ಖಿನ್ನತೆ, ಮಾನಸಿಕ ರೋಗ, ಮದ್ಯ, ಮಾದಕ ವಸ್ತು ಸೇವನೆ ವ್ಯಸನದಿಂದ ಬಳಲುತ್ತಿರುವವರನ್ನು ಗುರುತಿಸಿ ಚಿಕಿತ್ಸೆ ನೀಡಬೇಕಿದೆ. ಮನೋಚೈತನ್ಯ ಕಾರ‌್ಯಕ್ರಮದಡಿ ಮಾನಸಿಕ ತಜ್ಞರಿಂದ ಚಿಕಿತ್ಸೆ ಆಪ್ತ ಸಮಾಲೋಚನೆ ಕೊಡಿಸುವ ವ್ಯವಸ್ಥೆ ಇದೆ. ಯೋಗ, ಧ್ಯಾನದ ಮೂಲಕ ಜೀವನ ಶೈಲಿ ಬದಲಾವಣೆಯಿಂದ ಆತ್ಮಹತ್ಯೆ ನಿಯಂತ್ರಿಸಬೇಕಿದೆ ಎಂದರು.
ಜಿಲ್ಲಾರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕಾ ಮಾತನಾಡಿ, ನೆಟ್‌ವರ್ಕ್ ಟೆಲಿಮಾನಸ ಸಹಾಯವಾಣಿ ಸಂಖ್ಯೆ (14416/1800-89-14416)ಯೆಡೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರಆರೋಗ್ಯ ಶಿಕ್ಷಣಾಧಿ ಕಾರಿ ಬಿ.ಮೂಗಪ್ಪ, ವೈದ್ಯಾಧಿಕಾರಿಗಳಾದ ಡಾ.ದಶರತ್, ಡಾ.ರುದ್ರೇಶ್, ಡಾ.ನಳಿನಾಕ್ಷಿ ಮತ್ತಿತರರು ಇದ್ದರು.