ಹಿರೀಸಾವೆ ಹೋಬಳಿ ಡಿ.ತುಮಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್, ಸ್ವೆಟರ್ ವಿತರಿಸಲಾಯಿತು. ರಂಗಪ್ಪ, ಮಂಜುಳಾ, ಧರ್ಮಪಾಲ್, ಕೆ.ಆರ್.ರಾಮಚಂದ್ರ, ರಾಮೇಗೌಡ ಇತರರು ಇದ್ದರು. 
ಜಿಲ್ಲೆ

ಖಾಸಗಿ ಶಾಲೆಗಳತ್ತ ಪಾಲಕರ ವ್ಯಾಮೋಹ

ಹಿರೀಸಾವೆ: ಖಾಸಗಿ ಶಾಲೆಗಳತ್ತ ಮುಖ ಮಾಡುವ ಪಾಲಕರು, ಶಿಕ್ಷಣ ಮುಗಿದ ಬಳಿಕ ತಮ್ಮ ಮಕ್ಕಳಿಗೆ ಸರ್ಕಾರಿ ಉನ್ನತ ಹುದ್ದೆಯೇ ಬೇಕು ಎಂದು ಬಯಸುವುದು ಎಂತಹ ವಿಪರ್ಯಾಸ ಸಂಗತಿ ಎಂದು ನಿವೃತ್ತ ಶಿಕ್ಷಕ ರಂಗಪ್ಪ ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ಡಿ.ತುಮಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಟ್ರ್ಯಾಕ್ ಸೂಟ್, ಸ್ವೆಟರ್ ಹಾಗೂ ಇತರ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ನೀಡುವ ಉಚಿತ ಯೋಜನೆಗಳಿಗೆ ಜನರು ಮುಗಿಬೀಳುತ್ತಾರೆ. ಆದರೆ, ಸ್ವಾತಂತ್ರ್ಯ ಪೂರ್ವದಿಂದಲೂ ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದೆ. ಬಹುತೇಕ ಪಾಲಕರು ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ. ಅಲ್ಲದೆ, ಇಲ್ಲಿ ವಿದ್ಯೆ ಕಲಿತು ಸಮಾಜದಲ್ಲಿ ಗುರುತಿಸಿಕೊಂಡಿರುವ ಹಳೆ ವಿದ್ಯಾರ್ಥಿಗಳು ಕೈಲಾದ ಸಹಕಾರ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನ ಯುನಿಕ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಂಜುಳಾ ಅವರು ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್, ಸ್ವೆಟರ್ ಹಾಗೂ ಇತರ ಸಾಮಗ್ರಿಗಳನ್ನು ವಿತರಿಸಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಿಆರ್‌ಪಿ ಧರ್ಮಪಾಲ್, ಮುಖ್ಯ ಶಿಕ್ಷಕ ಕೆ.ಆರ್.ರಾಮಚಂದ್ರ, ಸಹ ಶಿಕ್ಷಕ ಬಿ.ಬಿ.ಉಮೇಶ್, ಅತಿಥಿ ಶಿಕ್ಷಕಿ ತನುಜಾ, ದಿಡಗ ಸರ್ಕಾರಿ ಹಿರಿಯ ಶಾಲೆಯ ಮುಖ್ಯಶಿಕ್ಷಕ ರಾಮೇಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ವಸಂತ ಕುಮಾರಾಚಾರಿ, ಉಪಾಧ್ಯಕ್ಷೆ ಶ್ರುತಿ, ಸದಸ್ಯ ಮಹಲಿಂಗಣ್ಣ ಇದ್ದರು.