ಜಿಲ್ಲೆ

ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯಧನ, ಸಚಿವ ಎಂಟಿಬಿ ನಾಗರಾಜ್ ಭರವಸೆ, ದಿನಸಿ ಕಿಟ್‌ಗಳ ವಿತರಣೆ

ನಂದಗುಡಿ: ಕರೊನಾ ಸೋಂಕು ನಿವಾರಣೆಗಾಗಿ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಖಾಸಗಿ ಶಾಲೆಗಳ ಶಿಕ್ಷಕರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ 2 ಸಾವಿರ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಂದಗುಡಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಖಾಸಗಿ ಶಾಲೆಯ 200 ಶಿಕ್ಷಕರಿಗೆ ಶನಿವಾರ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಖಾಸಗಿ ಶಿಕ್ಷಕರಿದ್ದಾರೆ. ತಾಲೂಕಿನಲ್ಲಿ 2 ಸಾವಿರಕ್ಕೂ ಹೆಚ್ಚು ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಖಾಸಗಿ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಿ 5 ಸಾವಿರ ರೂ. ಸಹಾಯಧನ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ನಿರ್ಧಾರ ಎಂದರು.

10 ಸಾವಿರ ರೂ.ಗೆ ಹೆಚ್ಚಿಸಲು ಪ್ರಯತ್ನ:

ಕಳೆದೊಂದು ವರ್ಷದಿಂದ ಸಂಕಷ್ಟಕ್ಕೆ ಈಡಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ 10 ಸಾವಿರ ರೂ. ಸಹಾಯ ಧನ ಘೋಷಿಸುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ಹೆಚ್ಚಿನ ಸಹಾಯ ಘೋಷಿಸುವಂತೆ ಪ್ರಯತ್ನಿಸುವುದಾಗಿ ಎಂಟಿಬಿ ಭರವಸೆ ನೀಡಿದರು.

ಟಿಬಿಎ್ ಹಣ ಬಿಡುಗಡೆ ಮಾಡಿಸಿ: ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಜವಾಬ್ದಾರಿ ಹೊತ್ತು ಖಾಸಗಿ ಶಾಲಾ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸಬೇಕು. ಶಿಕ್ಷಕರ ವೇತನದಲ್ಲಿ ಕಡಿತಗೊಳಿಸಿರುವ ಟಿಬಿಎಫ್ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿದರೆ ಶಿಕ್ಷಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅವರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಎಂಟಿಬಿ ನಾಗರಾಜ್ ಆಗ್ರಹಿಸಿದರು.

ತಾಲೂಕು ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ರೂ. ಸಹಾಯಧನ ೋಷಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ಸಚಿವ ಎಂಟಿಬಿ ನಾಗರಾಜ್ ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಎಸ್‌ಸಿ ಘಟಕ ತಾಲೂಕು ಅಧ್ಯಕ್ಷ ನಾಗೇಶ್, ತಾಲೂಕು ಉಪಾಧ್ಯಕ್ಷ ಎನ್. ಚಂದ್ರಪ್ಪ, ಗ್ರಾಪಂ ಸದಸ್ಯರಾದ ಮುನೇಗೌಡ, ಅಶ್ವತ್ಥ್, ಮಾಜಿ ಆಧ್ಯಕ್ಷ ನಟರಾಜ್, ಬಿಇಒ ಕನ್ನಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಂಪನ್ಮೂಲ ಶಿಕ್ಷಕರಾದ ಸುರೇಶ್ ಮತ್ತಿತರರಿದ್ದರು.