ಚಿತ್ರದುರ್ಗ: ನಗರದ ಖಾಸಗಿ ಶಾಲೆಗಳಲ್ಲಿ ವರ್ಷದಿಂದ, ವರ್ಷಕ್ಕೆ ಪ್ರವೇಶ ಶುಲ್ಕ ಹೆಚ್ಚಾಗುತ್ತಿದ್ದು, ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರು ಮಕ್ಕಳಿಗೆ ಶಿಕ್ಷಣ ಕೂಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಬೇಕೆಂಬ ಪಾಲಕರ ಇಚ್ಛೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು, ಪ್ರತಿ ವರ್ಷ ಪ್ರವೇಶ ಶುಲ್ಕವನ್ನು ಶೇ.15-20 ಹೆಚ್ಚಳ ಮಾಡುತ್ತಿವೆ ಎಂದು ದೂರಿದರು.
ಆದ್ದರಿಂದ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬಡ ಹಾಗೂ ಮಧ್ಯಮ ವರ್ಗದ ಪಾಲಕರ ಮೇಲೆ ಆರ್ಥಿಕ ಹೊರೆ ಬೀಳದಂತೆ ಶುಲ್ಕ ನಿಗದಿಪಡಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಕೂಡಲೇ ಸಮಿತಿ ರಚಿಸಬೇಕು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.
ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ ಹಾಗೂ ನಿರ್ದಿಷ್ಟ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಹೆಚ್ಚಿಸಬೇಕು. ಇದರಿಂದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
ಪದಾಧಿಕಾರಿಗಳಾದ ಸೈಯದ್ ಷಾ ತನ್ವಿರ್, ಆಕ್ವರ್ ಖಾನ್, ರವಿ, ವಿಜಯ, ಜಬೀವುಲ್ಲಾ ಇದ್ದರು.