ಜಿಲ್ಲೆ

ಖಾಸಗಿ ವಾಹನಗಳ ಓಡಾಟಕ್ಕೆ ತಡೆ

ಕಲಬುರಗಿ: ಕರೊನಾ ವೈರಸ್ದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡಿರುವ ಜಿಲ್ಲಾಡಳಿತ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲೆಯಿಂದ ಓಡಾಡುವ ಎಲ್ಲ ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಮತ್ತು ಬುಕ್ಕಿಂಗ್ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು ರಾಜಧಾನಿ ಬೆಂಗಳೂರು, ಇತರೆ ಜಿಲ್ಲೆಗಳು, ನೆರೆರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಿಗೆ ತೆರಳುವ ಮತ್ತು ಜಿಲ್ಲೆಯೊಳಗೆ ಬರುವ ಬಸ್ಗಳ ಸಂಚಾರ ನಿಲ್ಲಿಸಬೇಕು. ಈಗಾಗಲೇ ಬುಕ್ಕಿಂಗ್ ಮಾಡಿರುವ ಸೀಟುಗಳ ಟಿಕೆಟ್ಗಳನ್ನು ರದ್ದು ಮಾಡುವಂತೆಯೂ ಸೂಚಿಸಿದರು.
ಮುಂದಿನ ಆದೇಶದವರೆಗೆ ಇದನ್ನು ಪಾಲಿಸಬೇಕು. ಒಂದು ವೇಳೆ ಈ ಸೂಚನೆ ಮೀರಿ ಬಸ್ಗಳು ಸೇರಿ ಖಾಸಗಿ ವಾಹನಗಳನ್ನು ಓಡಿಸಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಖಾಸಗಿ ಬಸ್ಗಳನ್ನು ಓಡಿಸುವುದನ್ನು ನಿರ್ಬಂದಿಸಲು ಹದಿನೇಳು ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಈ ಚೆಕ್ಪೋಸ್ಟ್ಗಳಲ್ಲಿ ಬಸ್ಗಳ ಓಡಾಟದ ಮೇಲೆ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಇತ್ತೀಚೆಗೆ ಕೆಲವರು ಮುಂಬೈ, ಪುಣೆ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು, ಬಸ್ಗಳ ಮೂಲಕ ಕಲಬುರಗಿ ಜಿಲ್ಲೆಗೆ ಬಂದಿರುತ್ತಾರೆ. ಹಾಗಾಗಿ ಇದುವರೆಗೆ ಕಲಬುರಗಿ ನಗರ ಮತ್ತು ಜಿಲ್ಲೆಗೆ ಬಂದಿರುವ ಪ್ರಯಾಣಿಕರ ಸಂಪೂರ್ಣ ವಿವರ ನೀಡುವಂತೆ ಅವರು ಏಜೆಂಟರಿಗೆ ಸೂಚಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಸೇರಿ ಮತ್ತಿತರ ಅಧಿಕಾರಿಗಳು ಇದ್ದರು.