ಕಡೂರು: ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಪರಿಣಾಮ ಮಂಗಳವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು. ಬಸ್ ಡಿಪೋದಿಂದ ಬೆಳಗ್ಗೆಯಿಂದ ಯಾವುದೇ ಬಸ್‌ಗಳು ನಿಲ್ದಾಣಕ್ಕೆ ಬಾರದಿದ್ದರಿಂದ ಚಿಕ್ಕಮಗಳೂರು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಯಿತು. ಖಾಸಗಿ ಬಸ್‌ಗಳು ಇದ್ದುದರಿಂದ ಅನಿವಾರ್ಯವಾಗಿ ಅದರಲ್ಲೇ ತೆರಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳು ನಿಲ್ಲುವ ಜಾಗದಲ್ಲಿ ಖಾಸಗಿ ಬಸ್‌ಗಳು, ಜೀಪ್‌ಗಳು ನಿಂತಿದ್ದವು. ಹತ್ತಿರದ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳೇ ಹೆಚ್ಚು ಸಂಚರಿಸಿದವು. ಬಸ್ ನಿಲ್ದಾಣಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಖಾಸಗಿ ಬಸ್‌ಗಳು ಹಲವು ಮಾರ್ಗಗಳಲ್ಲಿ ಸಂಚರಿಸುವ ವೇಳೆ ಪ್ರಯಾಣಿಕರ ಹಿತದೃಷ್ಟಿಯಿಂದ ಸೇವೆ ನೀಡುವಂತೆ ಮನವಿ ಮಾಡಿದರು.
ಈ ಭಾಗದಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆಯಿರುವುದರಿಂದ ಗ್ರಾಮೀಣ ಭಾಗದ ಜನರು ಸಂಚರಿಸಲು ತೊಂದರೆಯಾಗುವ ಸಾಧ್ಯತೆಯಿದೆ. ದೂರದೂರುಗಳಿಗೆ ತೆರಳುವವರು ಪ್ರಯಾಣ ಮುಂದೂಡಿದ್ದಾರೆ. ರೈಲು ಸೌಕರ್ಯವಿರುವುದರಿಂದ ಬೆಂಗಳೂರು, ಅರಸೀಕೆರೆ, ಶಿವಮೊಗ್ಗ ಕಡೆಗೆ ತೆರಳುವವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬುದು ಮುಖ್ಯ ಆಶಯ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಗಮನ ಹರಿಸಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸಂಜೆ ಕೆಲವು ಸಾರಿಗೆ ಬಸ್‌ಗಳು ಸಂಚರಿಸಿದವು. ಕಡೂರು ಪಿಎಸ್‌ಐ ಸಜಿತ್‌ಕುಮಾರ್ ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು. ಪೊಲೀಸ್ ಹಿರಿಯ ಅಧಿಕಾರಿಗಳು ಬೆಳಗ್ಗೆಯೇ ತಾಲೂಕಿನ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.