ಜಿಲ್ಲೆ

ಖಾಸಗಿ ಬಡಾವಣೆ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರದ ಚಿಂತನೆಗೆ ರಿಯಲ್ ಎಸ್ಟೇಟ್ ವಿರೋಧ

ಮೈಸೂರು: ಖಾಸಗಿ ಬಡಾವಣೆಗೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಿಂದ ವಿರೋಧ ವ್ಯಕ್ತವಾಗಿದೆ.

ಖಾಸಗಿ ಬಡಾವಣೆ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ಪಡೆದುಕೊಳ್ಳಬೇಕಿದೆ. ಈ ಪ್ರಕ್ರಿಯೇ ಸದ್ಯಕ್ಕೆ ಚಾಲ್ತಿಯಲ್ಲಿ ಇದೆ. ಇದೀಗ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದುಕೊಳ್ಳಬೇಕಾಗುವ ಕಾಲ ಬರಬಹುದಾಗಿದೆ. ಇದು ಜಾರಿಯಾದರೆ, ಬೆಂಗಳೂರಿಗೆ ಅಲೆಯಬೇಕಾಗುತ್ತದೆ.

ಖಾಸಗಿ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸದೆ ನಿವೇಶನ ಹಂಚಲಾಗುತ್ತಿದೆ. ಆದ್ದರಿಂದ ಯಾರೇ ಖಾಸಗಿ ಬಡಾವಣೆಗಳನ್ನು ನಿರ್ಮಿಸಿದರೆ ಅಂತಹವರು ಸ್ಥಳೀಯ ಪ್ರಾಧಿಕಾರ ಜತೆಗೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಈ ಹೇಳಿಕೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಯೋಜನಾ ಪ್ರಾಧಿಕಾರ ಇರುವುದೇ ಬಡಾವಣೆಗಳ ನಿರ್ಮಾಣದ ಮೇಲೆ ನಿಗಾ ವಹಿಸಲು ರಚನೆಯಾದ ಸರ್ಕಾರಿ ಸಂಸ್ಥೆಗಳಾಗಿವೆ. ಸೂಕ್ತ ಮೂಲ ಸೌಲಭ್ಯ ಕಲ್ಪಿಸಿದ ಬಳಿಕವಷ್ಟೇ ಇವುಗಳು ಅನುಮತಿ ನೀಡಬೇಕು.

ಎನ್‌ಒಸಿ ಪಡೆದ ನಂತರ ನಿವೇಶನ ಹಂಚಲು ಸಾಧ್ಯ. ಇದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು, ಎಲ್ಲ ಪ್ರಮುಖ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಇವರು ಪರಿಶೀಲನೆ ನಡೆಸಿ, ದಾಖಲೆ ಸಮಗ್ರವಾಗಿ ನೋಡಿದ ನಂತರವೇ ಬಡಾವಣೆಗಳಿಗೆ ಅನುಮೋದನೆ ಕೊಡಲಾಗುತ್ತದೆ.

ಇವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಸೃಷ್ಟಿಯಾಗಲ್ಲ. ಆದರೆ ಇದುವೇ ಆಗುತ್ತಿಲ್ಲ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕಿಡಿಕಾರಿದ್ದಾರೆ.

ನಿಯಮಬಾಹಿರವಾಗಿ ಬಡಾವಣೆ ನಿರ್ಮಿಸುವವರಿಗೆ ಮೂಲಸೌಲಭ್ಯ ಇಲ್ಲದಿದ್ದರೂ ಅನುಮತಿ ಕೊಡಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಇನ್ನಷ್ಟು ಕಠಿಣ ನಿಯಮ ಜಾರಿಗೊಳಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೊಂದರೆ ಕೊಡುವುದು ಸರಿಯಲ್ಲ. ಇದು ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.