ಜಿಲ್ಲೆ

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆ ಒದಗಿಸಲಿ

ಧಾರವಾಡ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರೊನಾ ವಿರುದ್ಧದ ಹೋರಾಟದಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರ ಮುಖ್ಯ. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ದೇಶದ ಹಿತಕ್ಕಾಗಿ ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಅನಗತ್ಯವಾಗಿ ಭಯಪಡದೆ ಚಿಕಿತ್ಸೆ ನೀಡುವ ಮನೋಭಾವ ಬೆಳೆಸಿಕೊಳ್ಳಿ. ಕಿಮ್್ಸ ವೈದ್ಯರು ಮತ್ತು ಸಿಬ್ಬಂದಿ ನಾಲ್ಕೈದು ತಿಂಗಳಿಂದ ಮಾದರಿ ಸೇವೆ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಕಿಮ್್ಸ ತಂಡ ಸಿದ್ಧವಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಲಕ್ಷಣ ರಹಿತ ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ಹಾಸಿಗೆಗಳು ಲಭ್ಯವಿವೆ. ಲಕ್ಷಣವಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆ, ಐಸಿಯು ಹಾಗೂ ವೆಂಟಿಲೇಟರ್ ಮೀಸಲಿಡಬೇಕು. ಅರೆ ವೈದ್ಯಕೀಯ ಸಿಬ್ಬಂದಿ ಬೇರೆ ಊರುಗಳಿಂದ ಬರುತ್ತಿದ್ದರೆ ಅವರು ಬಯಸಿದರೆ ಲಾಕ್​ಡೌನ್ ಅವಧಿಯಲ್ಲಿ ಸರ್ಕಾರದ ಹಾಸ್ಟೇಲ್​ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ್, ಇತರರು ಇದ್ದರು.