ಧಾರವಾಡ: ಬರುವ ದಿನಗಳಲ್ಲಿ ಕೋವಿಡ್ ತಪಾಸಣೆಗೆ ಒಳಪಡಿಸುವ ಜನರ ಪ್ರಮಾಣದಲ್ಲಿ ಹೆಚ್ಚಳ ಮಾಡಿ, ಕರೊನಾ ನಿಯಂತ್ರಿಸಲು ಖಾಸಗಿ ಆಸ್ಪತ್ರೆಗಳು, ಔಷಧ ಅಂಗಡಿಗಳಿಂದ ಲಭ್ಯವಾಗುವ ಪ್ರಾಥಮಿಕ ಮಾಹಿತಿ ಅಗತ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಔಷಧ ಅಂಗಡಿಗಳ ವ್ಯಾಪಾರಸ್ಥರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಕೆಮಿಸ್ಟ್, ಡ್ರಗ್ಗಿಸ್ಟ್ಗಳು, ಕೆಪಿಎಂಇ ನೋಂದಾಯಿತ ವೈದ್ಯರು ಸಹಕಾರ ನೀಡಬೇಕು. ನಿತ್ಯ ನಿಗದಿತ ನಮೂನೆಯಲ್ಲಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆ ಇರುವವರ ಬಗ್ಗೆ ಮಾಹಿತಿ ಒದಗಿಸಬೇಕು. ಮಾಹಿತಿ ಸಂಗ್ರಹಕ್ಕೆ ಗೂಗಲ್ ಸ್ಪ್ರೆಡ್ಷೀಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಎರಡೂ ಸೌಲಭ್ಯಗಳಿವೆ. ಈಗ ಹೊಸದಾಗಿ ಅಭಿವೃದ್ಧಿಪಡಿಸಿರುವ ಆಪ್ ಸರಳವಾಗಿದ್ದು, ಪ್ರತಿ ಖಾಸಗಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಿಗೆ ಲಾಗಿನ್ ಐಡಿ ನೀಡಲಾಗುತ್ತದೆ. ತೀವ್ರ ಉಸಿರಾಟದ ತೊಂದರೆ ((ಖಅಐ), ಕೆಮ್ಮು ,ಜ್ವರ,ನೆಗಡಿ ((ಐಔಐ)) ಮಾದರಿಯ ಲಕ್ಷಣಗಳಿದ್ದರೆ ಅಂತಹ ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಸಲಹೆ ನೀಡಿದ ವೈದ್ಯರು ಅಥವಾ ಟೆಲಿಮೆಡಿಸಿನ್ ಆಧರಿಸಿ ಎಂಬ ಮಾಹಿತಿಗಳನ್ನು ನೀಡಬೇಕು ಎಂದರು.
ಮೊಬೈಲ್ ಆಪ್ನಿಂದ ಅಪ್ಡೇಟ್: ಹು-ಧಾ ಅವಳಿ ನಗರದಲ್ಲಿ ಸುಮಾರು 1 ಸಾವಿರ, ತಾಲೂಕುಗಳಲ್ಲಿ ಸುಮಾರು 200 ಔಷಧ ಅಂಗಡಿಗಳಿವೆ. ಕೆಪಿಎಂಇ ನೋಂದಾಯಿತ ಸುಮಾರು 1500 ವೈದ್ಯರು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಅವರೆಲ್ಲರೂ ಕಡ್ಡಾಯವಾಗಿ ಮೊಬೈಲ್ ಆಪ್ ಮೂಲಕ ಮಾಹಿತಿ ಪ್ರತಿದಿನ ಅಪ್ಡೇಟ್ ಮಾಡಬೇಕು. ಈ ಮಾಹಿತಿಗಳನ್ನು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಂಸ್ಕರಿಸಿ ಕಳುಹಿಸುವ ಕಾರ್ಯ ಮಾಡುವರು. ದೇಶದಾದ್ಯಂತ ಈ ಕಾರ್ಯ ನಡೆಯಲಿರುವುದರಿಂದ ಕರೊನಾ ನಿಯಂತ್ರಣಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತದೆ ಎಂದರು.
ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಅರ್ಹರು ಮಾತ್ರ ಆಸ್ಪತ್ರೆ, ಔಷಧ ಅಂಗಡಿಗಳನ್ನು ನಿರ್ವಹಿಸಬೇಕು. ಜಿಲ್ಲೆಯ ಫಾರ್ಮಸಿ ಕಾಲೇಜ್ಗಳ ಪ್ರಾಚಾರ್ಯರು ತಮ್ಮ ಉಪನ್ಯಾಸಕರ ತಂಡಗಳೊಂದಿಗೆ ಈ ಪರಿಶೀಲನೆ ಕಾರ್ಯದಲ್ಲಿ ಭಾಗಿಯಾಗಬೇಕು. ರೈಲ್ವೆ ಆಸ್ಪತ್ರೆ, ಎಸ್ಡಿಎಂ, ಕಿಮ್್ಸ, ಜಿಲ್ಲಾಸ್ಪತ್ರೆಗಳಲ್ಲಿರುವ ಗಂಟಲ ದ್ರವ ಸಂಗ್ರಹ ಕೇಂದ್ರ, ಮೊಬೈಲ್ ಫೀವರ್ ಕ್ಲಿನಿಕ್, ಮೊಬೈಲ್ ಸ್ವ್ಯಾಬ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿಗೆ ((ಖಅಐ), ((ಐಔಐ)) ಲಕ್ಷಣಗಳಿರುವವರನ್ನು ತ್ವರಿತವಾಗಿ ಕಳುಹಿಸಬೇಕು ಎಂದರು.
ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಔಷಧ ನಿಯಂತ್ರಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಕೆ.ಎಸ್, ಔಷಧ ವ್ಯಾಪಾರಿಗಳು, ಇತರರಿದ್ದರು.