ಜಿಲ್ಲೆ

ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

Chamarajanagar

ಕೊಳ್ಳೇಗಾಲ: ಸಮರ್ಪಕವಾಗಿ ಕುಡಿಯುವ ನೀರು ಬಿಡಬೇಕೆಂದು ಆಗ್ರಹಿಸಿ ಪಟ್ಟಣದ 19ನೇ ವಾರ್ಡ್ 12 ನೇ ಕ್ರಾಸ್‌ನಲ್ಲಿರುವ ಎಣ್ಣೆ ಮಿಲ್ ಡೌನ್ ನಿವಾಸಿಗಳು ಸೋಮವಾರ ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದರು.

ಹಲವು ತಿಂಗಳುಗಳಿಂದಲೂ ಈ ಬಡಾವಣೆಗೆ ನೀರನ್ನು ಸಮರ್ಪಕವಾಗಿ ಬಿಡುತ್ತಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ಅಕ್ಕಪಕ್ಕದ ಬೀದಿಗಳ ನಲ್ಲಿಗಳಲ್ಲಿ ನೀರು ಹಿಡಿದು ಉಪಯೋಗಿಸುವ ಪರಿಸ್ಥಿತಿ ಎದುರಾಗಿದೆ. ನೀರನ್ನು ಸರಿಯಾಗಿ ಬಿಡುವಂತೆ ನಗಸರಭೆ ಆಯುಕ್ತ ನಂಜುಂಡಸ್ವಾಮಿ, ವಾರ್ಡ್ ಸದಸ್ಯೆ ಸುಮಾ ಸುಬ್ಬಣ್ಣ ಮತ್ತು ನೀರುಗಂಟಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿಗಳು ರಾತ್ರಿ ಮಲಗಿದ ಮೇಲೆ ನೀರು ಬಿಡಲಾಗುತ್ತಿದೆ. ಒಂದೊಂದು ಬಾರಿ ವಾರಗಟ್ಟಲೇ ನೀರು ಬರುವುದಿಲ್ಲ. ಈ ಬಗ್ಗೆ ನಗರಸಭೆಗೆ ಹೇಳಿ ಹೇಳಿ ಸಾಕಾಗಿದೆ. ಪ್ರತಿಭಟನೆ ಬಳಿಕವೂ ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. ರಾಣಿ, ಮಹೇಶ್, ರಾಜಮ್ಮ, ಬಾಲು, ರಾಜೇಶ್ವರಿ, ರಾಜು, ಶ್ರೀನಿವಾಸ್, ಹುಚ್ಚಣ್ಣ, ಪ್ರದೀಪ್ ಮತ್ತಿತರರು ಇದ್ದರು.