ಗಜೇಂದ್ರಗಡ: ತಿಂಗಳು ಕಳೆದರೂ ಕುಡಿಯುವ ನೀರು ಪೂರೈಸದ ಪುರಸಭೆ ಅಧಿಕಾರಿಗಳ ವಿರುದ್ಧ 21ನೇ ವಾರ್ಡ್ನ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಪುರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ 21ನೇ ವಾರ್ಡಿಗೆ ನೀರು ಪೂರೈಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಪಟ್ಟಣದಲ್ಲಿ ಈಗಾಗಲೆ, 15 ರಿಂದ 18 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಪ್ರತಿ ವಾರ್ಡಿಗೆ 1 ತಾಸು ಮಾತ್ರ ನೀರು ಪೂರೈಸಲಾಗುತ್ತಿದೆ. ಇಲ್ಲಿ ಕೂಲಿಕಾರ್ವಿುಕರೇ ವಾಸಿಸುತ್ತಿದ್ದು, ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳಲು ಹಣಕಾಸಿನ ತೊಂದರೆಯಾಗುತ್ತಿದೆ. ಪ್ರಸ್ತುತ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದೇವೆ. ವಾರ್ಡಿನ ಬಹುತೇಕ ಮನೆಗಳಿಗೆ ನಳದ ವ್ಯವಸ್ಥೆ ಇಲ್ಲ. ಡಿಪಾಸಿಟ್ ಇಲ್ಲದೇ ನಳದ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಮ್ಮ ವಾರ್ಡಿನಲ್ಲಿ ಸಮರ್ಪಕ ನೀರು ಪೂರೈಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಸಿಐಟಿಯು ಮುಖಂಡ ಬಾಲು ರಾಠೋಡ ಮಾತನಾಡಿ, 15 ರಿಂದ 18 ದಿನಕ್ಕೊಮ್ಮೆ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದ್ದು, ಜನ ಜಾನುವಾರುಗಳು ಕುಡಿಯಲು ಹನಿ ನೀರಿಗೂ ಪರಿತಪಿಸುವಂತಾಗಿದೆ. ಅಲ್ಲದೆ, ಪಟ್ಟಣದಲ್ಲಿ ನದಿ ನೀರಿನ ಮೂಲಗಳಿಲ್ಲ. ಇದರಿಂದಾಗಿ ಪಟ್ಟಣದ ಜನ ಬೋರ್ವೆಲ್ ನೀರನ್ನೇ ನಂಬಿ ಜೀವನ ನಡೆಸುವಂತಾಗಿದೆ. ಆದ್ದರಿಂದ ಕೂಡಲೆ, ಜಿಲ್ಲಾಧಿಕಾರಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೃಷ್ಣಾ ಬಿಸ್ಕೀಂ ಯೋಜನೆಯಡಿ ಪಟ್ಟಣಕ್ಕೆ ನೀರು ಒದಗಿಸಬೇಕು. ಇಲ್ಲವಾದರೆ ನೀರಿಗಾಗಿ ಮುಂದೆ ನಡೆಯುವ ಹೋರಾಟಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದರು.
ಪ್ರತಿಭಟನಾ ನಿರತ ಮಹಿಳೆಯರ ಅಹವಾಲು ಆಲಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಮನೆಗಳಿಗೆ ಡೆಪಾಸಿಟ್ ಇಲ್ಲದೆ ನೀರಿನ ಸಂಪರ್ಕ ಕೊಡಲು ಸಾಧ್ಯವಿಲ್ಲ. ಆದರೆ, ಎರಡು ದಿನಗಳ ಕಾಲಾವಕಾಶ ನೀಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
EndFragment