ಖಾನಾಪುರ: ಮಳೆ ಕೊರತೆಯಿಂದ ಭತ್ತದ ಬೆಳೆ ಕೈಕೊಟ್ಟಿದೆ. ಲೋಡ್ ಶೆಡ್ಡಿಂಗ್ ಹಾಗೂ ಕಾಡುಪ್ರಾಣಿಗಳಿಂದ ಕಷಿ ಚಟುವಟಿಕೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಅಧಿಕಾರಿಗಳು ಪಾರದರ್ಶಕ ಸಮೀಕ್ಷೆ ನಡೆಸಿ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆ ಮತ್ತು ಹಸಿರು ಸೇನೆ ನೇತತ್ವದಲ್ಲಿ ರೈತರು ಖಾನಾಪುರ ತಹಸೀಲ್ದಾರಗೆ ಮಂಗಳವಾರ ಮನವಿ ಸಲ್ಲಿಸಿದರು.
ಸರಾಸರಿ ಶೇ.60 ಮಳೆ ಆಗಿಲ್ಲ. ಇದನ್ನು ಸರ್ಕಾರವೇ ಪ್ರಕಟಿಸಿದೆ. ಖಾನಾಪುರ ತಾಲೂಕಿನಲ್ಲಿ ಈ ವರ್ಷ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಕಂದಾಯ, ಕಷಿ ಇಲಾಖೆ ಅಧಿಕಾರಿಗಳು ಇದನ್ನು ಕಂಡಿಲ್ಲ. ಈ ಅನ್ಯಾಯ ಹೋಗಲಾಡಿಸಲು ರೈತರ ಜತೆಗೂಡಿ ಜಂಟಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ, ಗಣೇಬೈಲ್ ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡಬೇಕು. ಹೆದ್ದಾರಿಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಭೂಮಿಯ ದರವನ್ನು ಎನ್‌ಎ ಮತ್ತು ಮಾರುಕಟ್ಟೆ ಬೆಲೆಯಂತೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಯಲ್ಲಪ್ಪ ಚನ್ನಾಪುರ, ಕಿಶೋರ ಮಿಠಾರಿ, ಅಶೋಕ ಯಮಕನಮರಡ್ಡಿ, ಪ್ರಕಾಶ ನಾಯಕ, ಕೃಷ್ಣಾ ಬಾಳಣ್ಣವರ, ಶಿವಾಜಿ ಅಂಬಡಗಟ್ಟಿ, ಪುಂಡಲೀಕ ಉಳಾಗಡ್ಡಿ, ನಿಂಗಪ್ಪ ಸಂಬರಗಿ, ನೀಲಕಂಠ ಗುಂಜಿಕರ ಇತರರು ಇದ್ದರು.