ಖಾನಾಪುರ, ಬೆಳಗಾವಿ: ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸೋನಾಲಿ ಸರ್ನೊಬತ್ ಗುರುವಾರ ಭೇಟಿ ಮಾಡಿದರು. ಬಳಿಕ ಮಾತನಾಡಿ, ಖಾನಾಪುರ ತಾಲೂಕಿನ ಕೆಲವು ಗ್ರಾಮಗಳ ರಸ್ತೆ ಸಂಪರ್ಕ, ಸೇತುವೆ ನಿರ್ಮಾಣ ಹಾಗೂ ಮರಾಠ ನಿಗಮ ಯೋಜನೆಗಳ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು. ಖಾನಾಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು.
ಮರಾಠ ಸಮಾಜದ ಅಬಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀವಕುಮಾರ್ ಕಟೀಲ್ ಅವರ ಜತೆ ಕ್ಷೇತ್ರದ ರಾಜಕೀಯ ಬೆಳವಣಿಗೆ ಹಾಗೂ ಮಹಿಳಾ ಮೋರ್ಚಾ ಸಂಘಟನೆ ಬೆಳವಣಿಗೆ ಬಗ್ಗೆ ಚರ್ಚಿಸಿದರು. ತಾಲೂಕಿನ ಮುಖಂಡರಾದ ಬಸವರಾಜ ಈಶ್ವರ ಸಾಣಿಕೊಪ್ಪ, ಅರ್ಜುನ ಗಾವಡೆ, ಅನಂತ ಗಾವಡೆ, ಜ್ಞಾನೇಶ್ವರ ಗಾವಡೆ, ಭಾರತಿ ತಕ್ಕಡೆ, ನಾಗೇಶ ರಾಮಜಿ, ವಿನಾಯಕ ನಾಯಕ ಇತರರಿದ್ದರು.