ಹಾನಗಲ್ಲ: ಹಾವೇರಿ ಜಿಲ್ಲೆಯಾದ್ಯಂತ ಇತ್ತೀಚೆಗೆ ಶುಂಠಿಯನ್ನು ತೋಟಗಾರಿಕೆ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಈ ಬೆಳೆಯನ್ನೂ ಸೇರಿಸುವ ಅಗತ್ಯವಿದೆ ಎಂದು ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬೇಸಿಗೆಯಲ್ಲಿ ಶುಂಠಿ ದರ ಕುಸಿತವಾಗಿತ್ತು. ಇದರಿಂದ ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಇಂಥ ಸಂದರ್ಭದಲ್ಲಿ ಈ ಯೋಜನೆಯಿಂದ ರೈತರ ಆರ್ಥಿಕ ಹೊರೆ ತಗ್ಗಿಸಬಹುದು ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 1,069 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ಹಾಗೂ ವರದಾ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ 2.18 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ಸಂಪರ್ಕ ಕಲ್ಪಿಸಲಾಗುವುದು. 8.57 ಲಕ್ಷ ಜನರಿಗೆ ಕುಡಿಯುವ ನೀರೊದಗಿಸಬಹುದಾಗಿದೆ. ಈಗಾಗಲೇ ತಾಂತ್ರಿಕ ಒಪ್ಪಿಗೆ ದೊರೆತಿದೆ. ಹಂಸಭಾವಿ ಮಾರ್ಗವಾಗಿ ಹಿರೇಕೆರೂರ, ಹಾನಗಲ್ಲ ತಾಲೂಕಿನ ಜನರಿಗೆ ಇದರ ಪ್ರಯೋಜನ ದೊರೆಯಲಿದೆ. ಹಾನಗಲ್ಲ ತಾಲೂಕಿನ 130 ಗ್ರಾಮಗಳಿಗೆ ನೀರು ಸರಬರಾಜು ಆಗಲಿದೆ ಎಂದು ಸಂಸದರು ವಿವರಿಸಿದರು. ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹೊಸದಾಗಿ 5 ಕಡೆಗಳಲ್ಲಿ ಕೆರೆ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆ. ತಾಲೂಕಿನ 16 ಅಂಗನ ವಾಡಿಗಳಿಗೆ ಶೌಚಗೃಹದ ಅಗತ್ಯವಿದೆ. ಆದರೆ, 14 ಅಂಗನವಾಡಿಗಳಲ್ಲಿ ಸ್ಥಳದ ಅಭಾವವಿದೆ. ಈ ಹಿನ್ನೆಲೆಯಲ್ಲಿ ಶಾಲೆ ಅಥವಾ ಸರ್ಕಾರಿ ಕಟ್ಟಡಗಳಿರುವಲ್ಲಿ ಸಮುದಾಯ ಶೌಚಗೃಹ ನಿರ್ವಿುಸಲು ಸಿಡಿಪಿಒ ಅವರಿಗೆ ಸೂಚಿಸಲಾಗಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಎಸ್. ಜಿ. ಕೊರವರ, ಉಪಕಾರ್ಯದರ್ಶಿ ಎಸ್.ಬಿ. ಮಳ್ಳಳ್ಳಿ, ಸಹಾಯಕ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ, ತಾಪಂ ಆಡಳಿತಾಧಿಕಾರಿ ರಾಜು ಕೋಲೇರ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಇಒ ಬಿ. ಸುನೀಲ್ಕುಮಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುಕುಮಾರ, ನರೇಗಾ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಸಿಪಿಐ ಶಿವಶಂಕರ ಗಣಾಚಾರಿ ಇದ್ದರು.