ಬಂಧಿತ ಚಿಗೋಜಿ 
ಜಿಲ್ಲೆ

ಖಾತೆಗೆ ಕನ್ನ, ನೈಜೇರಿಯಾ ಪ್ರಜೆ ಸೆರೆ

ಚಿಕ್ಕೋಡಿ: ಬ್ಯಾಂಕ್‌ಗಳಲ್ಲಿ ಗ್ರಾಹಕರು ಹೊಂದಿದ್ದ ಉಳಿತಾಯ ಖಾತೆಯನ್ನು ಹ್ಯಾಕ್ ಮಾಡಿ, ಹಣ ಲಪಟಾಯಿಸುತ್ತಿದ್ದ ವಿದೇಶಿಗ ಸೇರಿ ಮೂವರನ್ನು ಬಂಧಿಸಲಾಗಿದೆ. ಮುಂಬೈ ಪೂರ್ವದ ನಾಲಾ ಸೋಪುರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ನೈಜೇರಿಯಾದ ಉಜಕಾ ಪೀಟರ್ ಚಿಗೋಜಿ (40) ಹಾಗೂ ಪಾಲಗರ ಜಿಲ್ಲೆ ವಸಾಯಿ ತಾಲೂಕಿನ ನಾಯಗಾಂವ ಗ್ರಾಮದ ಇಂದ್ರೇಶ ಹರಿಶಂಕರ ಪಾಂಡೆ(28) ಹಾಗೂ ಮುಂಬೈ ಮೂಲದ ಅಭಿಜಿತ ಘನಶ್ಯಾಮ್(27) ಎಂಬಾತರನ್ನು ಬಂಧಿಸಿ, ಅವರಿಂದ 3 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.

ಬೋರಗಾಂವ ಪಟ್ಟಣದ ಅರಿಹಂತ ಕ್ರೆಡಿಟ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ಅಶೋಕ ಜಿನ್ನು ಬಂಕಾಪುರೆ ಸ್ಥಳೀಯ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದರು. ಇವರ ಖಾತೆಯಿಂದ ಇತ್ತೀಚೆಗೆ 94,72,351 ರೂ. ಹಣ ಲಪಟಾಯಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸದಲಗಾ ಠಾಣೆ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿತ, ಆಫ್ರಿಕಾ ಮೂಲದ ಟೋನಿ ಎಂಬಾತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಮನೋಜ್‌ಕುಮಾರ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಆರ್.ವೈ. ಬೀಳಗಿ, ಎಸ್.ಭರತ್, ರಾಕೇಶ ಬಗಲಿ, ಎಸ್.ಎ.ಗೋಡಸೆ, ಎಸ್.ಎಚ್.ದೇವರ, ಎಸ್.ಪಿ.ಗಲಗಲಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.