ಕೊಳ್ಳೇಗಾಲ: ಪಟ್ಟಣದ ನಗರಸಭೆಯ 29ನೇ ವಾರ್ಡ್‌ಗೆ ಸೇರಿದ ಬೆಂಡರಹಳ್ಳಿ ಗ್ರಾಮದಲ್ಲಿ ನಗರಸಭೆ ವತಿಯಿಂದ ಬುಧವಾರ ಖಾತಾ ಆಂದೋಲನ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ಎನ್.ಮಹೇಶ್ ಮಾತನಾಡಿ, ಇಲ್ಲಿನ ನಗರಸಭೆಯ 31ರ ಪೈಕಿ 14 ವಾರ್ಡ್‌ಗಳು ಹಿಂದೆ ಮಂಡಲ ಪಂಚಾಯಿತಿಯಿಂದ ಪುರಸಭೆಗೆ ವರ್ಗಾವಣೆಗೊಂಡಿದ್ದವು. ಬಳಿಕ ಪುರಸಭೆಯಾಗಿದ್ದ ಕೊಳ್ಳೇಗಾಲ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಆದರೆ ನಗರಸಭೆಯ ವಾರ್ಡ್‌ಗಳು ಸೇರಿದಂತೆ ಅದಕ್ಕೆ ಸೇರ್ಪಡೆಯಾದ ಹಲವು ವಾರ್ಡ್‌ಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಇನ್ನೂ ದಾಖಲೆಗಳಿಲ್ಲ. ದಾಖಲೆ ಪಡೆದುಕೊಳ್ಳಲು ನಗರಸಭೆಗೆ ಹೋದರೆ ಅಧಿಕಾರಿಗಳು ಮೂಲ ದಾಖಲೆ ಕೇಳುತ್ತಿದ್ದರು. ಈ ಹಿಂದೆ ಆಸ್ತಿಗಳಿಗೆ ದಾಖಲೆ ಮಾಡಿಸಿಕೊಳ್ಳದ ಹಿನ್ನೆಲೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಳೆದ ವರ್ಷ ನಗರಸಭೆಯ ಬೋರ್ಡ್ ಸಭೆಯಲ್ಲಿ ಖಾತಾ ಆಂದೋಲನ ಕಾರ್ಯಕ್ರಮ ಕೈಗೊಂಡು ಮನೆ ಬಾಗಿಲಿಗೆ ತೆರಳಿ ಜನರಿಗೆ ದಾಖಲೆ ಒದಗಿಸುವ ತೀರ್ಮಾನ ಮಾಡಲಾಗಿತ್ತು. ಅದರಂತೆ ಇದೀಗ ನಗರಸಭೆ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಆಸ್ತಿಗಳಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ. ಈ ಸದಾವಕಾಶವನ್ನು ಬಳಸಿಕೊಂಡು ಮನೆ ಹಾಗೂ ನಿವೇಶನ ಖಾತೆ, ದಾಖಲೆ ತಿದ್ದುಪಡಿ ಸಮಸ್ಯೆಗಳನ್ನು ನಗರ ನಿವಾಸಿಗಳು ಪರಿಹರಿಸಿಕೊಳ್ಳಬೇಕು. ಕಂದಾಯ ಬಾಕಿ ಇದ್ದರೆೆ ಸ್ಥಳದಲ್ಲೇ ಕಂದಾಯ ಕಟ್ಟಿ, ಲಭ್ಯ ವಿರುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ ಖಾತೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
45 ಅರ್ಜಿ ಸ್ವೀಕಾರ: ಖಾತಾ ಆಂದೋಲನದಲ್ಲಿ ದಾಖಲೆ ಮಾಡಿಕೊಡುವಂತೆ 45 ಅರ್ಜಿಗಳು ಬಂದವು. ಎಲ್ಲ ದಾಖಲೆಗಳು ಪರಿಪೂರ್ಣವಾಗಿದ್ದ 6 ಜನರಿಗೆ ಶಾಸಕ ಎನ್.ಮಹೇಶ್ ಅವರ ಸಮ್ಮುಖದಲ್ಲಿ ಸ್ಥಳದಲ್ಲೇ ನಮೂನೆ-3 ಅನ್ನು ನೀಡಲಾಯಿತು.
ನಗರಸಭೆ ಸದಸ್ಯೆ ರಮ್ಯಾ ಮಹೇಶ್, ನಾಮನಿರ್ದೇಶನ ಸದಸ್ಯ ಜಿ.ಸೆಲ್ವರಾಜ್, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಮುಖಂಡರಾದ ಮಹೇಶ್, ಶಿವಕುಮಾರ್ ಹಾಗೂ ಗ್ರಾಮದ ಯಜಮಾನರು ಇದ್ದರು.