ಜಿಲ್ಲೆ

ಖಾಜಾ ಬಂದಾ ನವಾಜ್​ ದರ್ಗಾದ ಸಜ್ಜಾದೆ ನಶೀನ್ ಮಣ್ಣಲ್ಲಿ ಲೀನ

ಕಲಬುರಗಿ: ಸಹಸ್ರಾರು ಭಕ್ತರು, ಗಣ್ಯರು, ಪ್ರಮುಖರ ಅಶ್ರುತರ್ಪಣದ ಮಧ್ಯೆ ನಗರದ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ೨೩ನೇ ಪೀಠಾಧಿಪತಿ, ಪೂಜ್ಯ ಸಜ್ಜಾದೆ ನಶೀನ್ ಡಾ.ಸೈಯದ್ ಷಾ ಖುಸ್ರೋ ಹುಸೇನಿ ಅವರ ಅಂತ್ಯಕ್ರಿಯೆ ನಗರದ ಕೆಬಿಎನ್ ದರ್ಗಾದ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ, ದರ್ಗಾ ಸಂಪ್ರದಾಯದ ವಿಧಿ ವಿಧಾನದಂತೆ ಗುರುವಾರ ಸೂರ್ಯಾಸ್ತದ ವೇಳೆ ನೆರವೇರಿತು.

ವಯೋಸಹಜ ಅನಾರೋಗ್ಯದಿಂದ ಬುಧವಾರ ತಡರಾತ್ರಿ ನಿಧನರಾದ ಅವರ ಪಾರ್ಥೀವ ಶರೀರವನ್ನು ಗುರುವಾರ ಬೆಳಗ್ಗೆ ದರ್ಗಾ ಪಕ್ಕದಲ್ಲಿರುವ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಗರ ಸೇರಿ ದೇಶದ ವಿವಿಧ ಭಾಗದ ಗಣ್ಯರು, ಮುಸ್ಲಿಂ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಹಸ್ರಾರು ಭಕ್ತರು ಅಂತಿಮ ದರ್ಶನ ಪಡೆದರು.

ಗುರುವಾರ ಮಧ್ಯಾಹ್ನದ ನಮಾಜ್ ನಂತರ ಮನೆಯಿಂದ ದರ್ಗಾಕ್ಕೆ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಬಂದು, ದರ್ಗಾದ ಮೆಟ್ಟಿಲುಗಳ ಬಳಿ ಸಾರ್ವಜನಿಕರ ದರ್ಶನ ಮಾಡಿಸಲಾಯಿತು. ನಂತರ ದರ್ಗಾದ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೂರು ಸುತ್ತಿನ ಕುಶಾಲ ತೋಪು ಸಿಡಿಸಿ, ಗೌರವ ಸಲ್ಲಿಸಲಾಯಿತು.

ಸರ್ಕಾರಿ ಗೌರವದ ನಂತರ ಖ್ವಾಜಾ ಬಂದಾನವಾಜ್ ಗೇಸುದರಾಜ್ ದರ್ಗಾದ ಆವರಣದಲ್ಲೇ ಇರುವ ಪೂರ್ವಜರ ಸಮಾಧಿ ಸ್ಥಳದ ಪಕ್ಕದಲ್ಲೇ ಪೂರ್ವಭಾವಿಯಾಗಿಯೇ ಸಿದ್ಧಪಡಿಸಿದ್ದ ಸಮಾಧಿಯಲ್ಲಿ ಪುತ್ರರಾದ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಡಾ.ಸೈಯದ್ ಮುಸ್ತಫಾ ಅಲ್ ಹುಸೇನಿ ಸಾನ್ನಿಧ್ಯದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಗಣ್ಯರಿಂದ ಅಂತಿಮ ದರ್ಶನ

ಪ್ರಭಾವತಿ ಧರ್ಮಸಿಂಗ್, ಎಐಎಂಐಎA ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಎಂಎಲ್‌ಸಿ ಶಶೀಲ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಗುಲ್ಬರ್ಗ ವಿವಿ ಕುಲಪರಿತ ಪ್ರೊ.ದಯಾನಂದ ಅಗಸರ, ಕೂಡಾ ಅಧ್ಯಕ್ಷ ಮಜರ್ ಆಲಂ ಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಜಿಪಂ ಸಿಇಒ ಭಂವರ್‌ಸಿAಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ್, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಡೆಕ್ಕಾ ಕಿಶೋರಬಾಬು, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಎಸಿ ಸಾಹಿತ್ಯ, ಎಡಿಸಿ ರಾಯಪ್ಪ ಹುಣಸಗಿ, ಎಚ್‌ಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಇಲಿಯಾಸ್ ಶೇಠ್ ಭಾಗವಾನ್, ಶಿವಕುಮಾರ ಇಂಗೀನಶೆಟ್ಟಿ, ದೇವೇಗೌಡ ತೆಲ್ಲೂರ, ಬಸವರಾಜ ಬಿರಬಿಟ್ಟೆ, ಪಾಲಿಕೆ ಸದಸ್ಯರಾದ ಸೈಯದ್ ಅಹ್ಮದ್, ಅಜ್ಮಲ್ ಗೋಲಾ, ಫರಾಜುಲ್ ಇಸ್ಲಾಂ ಸೇರಿ ಗಣ್ಯರು ಪಾಲ್ಗೊಂಡಿದ್ದರು.