ಜಿಲ್ಲೆ

ಖಾಕಿ ಬಂದೋಬಸ್ತ್, ಡ್ರೋನ್ ನಿಗಾ  -ಕಾನೂನು ಮೀರಿದರೆ ನಿರ್ದಾಕ್ಷಿಣ್ಯ ಕ್ರಮ -ಎಸ್ಪಿ ಎಚ್ಚರಿಕೆ

ದಾವಣಗೆರೆ: ಅಯೋಧ್ಯೆ ಶ್ರೀರಾಮ ಮಂದಿರದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು-ರಾತ್ರಿ ಡ್ರೋನ್ ಕಣ್ಗಾವಲು ಜತೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿವಿಧ ಕೋಮಿನ ಮುಖಂಡರೊಡನೆ ಸಭೆ ನಡೆಸಿ ಶಾಂತಿ ಸೌಹಾರ್ದ ಸಂಬಂಧ ಸಾರ್ವಜನಿಕರಿಗೆ ನೀಡಲಾದ ಸೂಚನೆಗಳನ್ನು ಪಾಲಿಸಬೇಕು. ಅವನ್ನು ಮೀರಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕ್ರಮ ಕೈಗೊಳ್ಳಲಾಗುವುದು.

ಸಂಭ್ರಮಾಚರಣೆ ವೇಳೆ ಪ್ರಚೋದನಾಕಾರಿ ಹಾಡುಗಳು, ಘೋಷಣೆಗಳಿಗೆ ಅವಕಾಶವಿಲ್ಲ. ಪ್ರಚೋದನಾತ್ಮಕ ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ. ಜನಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆ ನೀಡಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ, ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡಿದರೆ, ಪೋಸ್ಟ್‌ಗಳನ್ನು ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವುದು ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---