ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. 
ಜಿಲ್ಲೆ

ಖಾಂಡ್ಯ ಮಾರ್ಕಾಂಡೇಶ್ವರ ಅದ್ದೂರಿ ರಥೋತ್ಸವ

ಬಾಳೆಹೊನ್ನೂರು: ಖಾಂಡ್ಯ ತ್ರಯಂಬಕ ಮೃತ್ಯುಂಜಯ ಮಾರ್ಕಾಂಡೇಶ್ವರ ಸ್ವಾಮಿ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಮಹಾರಥೋತ್ಸವ ಅಂಗವಾಗಿ ಎರಡು ದಿನಗಳಿಂದ ಗುರು-ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಹೋಮ, ಗಂಗೆಗಿರಿ ಪಂಚಮುಖಿ ಕ್ಷೇತ್ರದಲ್ಲಿ ಪೂಜೆ, ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ನಡೆಯಿತು.

ಶನಿವಾರ ಶೃಂಗೇರಿ ಶಾರದಾ ಪೀಠದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮಾರ್ಕಾಂಡೇಶ್ವರ ಸ್ವಾಮಿ ಮಹಾರಥೋತ್ಸವದ ಧಾರ್ಮಿಕ ಕಾರ್ಯಗಳು ನಡೆದವು. ರಥೋತ್ಸವದಲ್ಲಿ ಸಂಗಮೇಶ್ವರಪೇಟೆ, ಬೊಗಸೆ, ಬಾಸಾಪುರ, ಕಡಬಗೆರೆ, ದೇವದಾನ, ಕಡವಂತಿ, ಬಾಳೆಹೊನ್ನೂರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಭಕ್ತಾದಿಗಳು ಬೆಳೆದ ಭತ್ತ, ಅಡಕೆ, ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆಹಣ್ಣು, ದವಸ ಧಾನ್ಯಗಳನ್ನು, ಫಲ ಪುಷ್ಪವನ್ನು ಮಹಾರಥದೆಡೆಗೆ ಎರಚಿದರು. ಜಾತ್ರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಶಯನೋತ್ಸವ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು ಕಮ್ಮರಡಿ ಲಕ್ಷ್ಮೀನಾರಾಯಣ ಸೋಮಯಾಜಿ ನೇತೃತ್ವದಲ್ಲಿ ನಡೆಯಿತು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ.ಮಂಜುನಾಥ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.