ಜಿಲ್ಲೆ

ಖರ್ಗೆ ಹೇಳಿಕೆ ಕಾಂಗ್ರೆಸ್ ಹತಾಶೆಗೆ ಸಾಕ್ಷಿ

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು’ ಎಂದು ನಿಂದಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಹತಾಶೆ ಮತ್ತು ನಿರಾಶೆಗೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಕಿಡಿಕಾರಿದರು.


ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಮತಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮೋದಿ ಅವರ ಲೋಕಪ್ರಿಯತೆಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಆ ಹೊಟ್ಟೆ ಉರಿಗೆ ಇಂತಹ ಹತಾಶ ಹೇಳಿಕೆಗಳು ಹೊರಬಿದ್ದಿವೆ. ಇದು ಆ ಪಕ್ಷದ ಮನಸ್ಥಿತಿಯಾಗಿದೆ ಎಂದರು.


ಅಧಿಕಾರಕ್ಕಾಗಿ ಕಾಂಗ್ರೆಸ್ ಜಾತಿ ಜಾತಿ, ಮತ ಮತ, ಧರ್ಮ ಧರ್ಮಗಳ ನಡುವೆ ವಿಭಜಕ ರಾಜಕಾರಣ ಮಾಡುತ್ತಿದೆ. ಸಮಾಜದಲ್ಲಿ ವೈಮನಸ್ಸು ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಧರ್ಮ ಆಧಾರದ ಮೇಲೆ ಮೀಸಲಾತಿ ನೀಡಿ ಸಂವಿಧಾನಕ್ಕೆ ದ್ರೋಹ ಬಗೆದಿದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನೇ ಮೂಲೆಗುಂಪು ಮಾಡಿತ್ತು. ಆದರೆ, ಬಿಜೆಪಿ ಯಾವತ್ತೂ ಈ ರೀತಿ ರಾಜಕಾರಣ ಮಾಡಲ್ಲ. ಸಂವಿಧಾನ ಆಧಾರಿತ ಆಡಳಿತ ನಡೆಸುವ ಮೂಲಕ ಧರ್ಮ, ಜಾತಿಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತದೆ ಎಂದರು.


ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಬಿಜೆಪಿ ಸಹಿಸುವುದಿಲ್ಲ. ಭ್ರಷ್ಟಾಚಾರಿಗಳ ಮನೆ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಮೋದಿ ನೇತೃತ್ವದ 9 ವರ್ಷ ಆಡಳಿತ ಕೇಂದ್ರ ಸರ್ಕಾರದ ಸಚಿವರೊಬ್ಬರ ಮೇಲೆಯೂ ಭ್ರಷ್ಟಾಚಾರ ಆರೋಪವಿಲ್ಲ. ಅದೇ ರೀತಿ ರಾಜ್ಯದಲ್ಲೂ ಭ್ರಷ್ಟಾಚಾರ ರಹಿತ ಸರ್ಕಾರ ನೀಡಲಾಗಿದೆ ಎಂದು ಹೇಳಿದರು.


ವ್ಯವಸ್ಥೆ ಬದಲಾವಣೆಯಾಗದೆ ಭ್ರಷ್ಟಾಚಾರಕ್ಕೆ ಅಂಕುಶ ಹಾಕುವುದು ಅಸಾಧ್ಯ. ‘ದೆಹಲಿಯಿಂದ ಬಿಡುಗಡೆಯಾಗುವ 100 ರೂ. ಗ್ರಾಮ ಮಟ್ಟಕ್ಕೆ ತಲುಪುವ ಹೊತ್ತಿಗೆ 17 ಪೈಸೆಗೆ ಆಗಲಿದೆ’ ಎಂದು ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಸರ್ಕಾರವು ವ್ಯವಸ್ಥೆಯನ್ನು ಬದಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ ಎಂದರು.


ಸರ್ಕಾರದಿಂದ ಬಿಡುಗಡೆಯಾದ ಅನುದಾನ ಪೂರ್ಣಪ್ರಮಾಣದಲ್ಲಿ ಫಲಾನುಭವಿಗಳಿಗೆ ತಲುಪಿಸಲು ನೇರ ಹಣ ವರ್ಗಾವಣೆ ಯೋಜನೆ ಜಾರಿ ಮಾಡಿದೆ. ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆಯನ್ನು ಬಲಪಡಿಸಿದೆ. ಒಂದು ಪೈಸೆ ಸಹ ಸೋರಿಕೆ ಆಗದಂತೆ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.


ಕಳೆದ 9 ವರ್ಷದಲ್ಲಿ ಕೇಂದ್ರ ಸರ್ಕಾರವು 28 ಲಕ್ಷ ಕೋಟಿ ರೂ. ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದೆ. ಹಳೆ ವ್ಯವಸ್ಥೆಯಿದ್ದರೆ 5-6 ಲಕ್ಷ ಕೋಟಿ ರೂ. ಸೋರಿಕೆ ಆಗಿ ಹೋಗುತ್ತಿತ್ತು. ಇದೆಲ್ಲ ಈಗ ತಪ್ಪಿದೆ ಎಂದರು.


ಪ್ರತಿಯೊಬ್ಬ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕು ಎಂಬುದು ಮೋದಿ ಅವರ ಆಶಯ. ಪ್ರತಿ ಬಡವರ ಮನೆಯಲ್ಲೂ ಶೌಚಗೃಹ, ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ಈ ವರ್ಷ ಬಹುತೇಕ ಮನೆಗಳಿಗೆ ನೀರು ಸಂಪರ್ಕ, ಶೌಚಗೃಹ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸಾಮಾನ್ಯ ವ್ಯಕ್ತಿ ಅಭಿವೃದ್ಧಿ ದೇಶದ ಅಭಿವೃದ್ಧಿ ಆಗಿದೆ ಎಂದರು.