ಜಿಲ್ಲೆ

ಖರ್ಗೆ ಅವರೇನು ಪ್ರಧಾನಿ ಅಭ್ಯರ್ಥಿ ಅಲ್ಲ ; ಸಿ.ಟಿ. ರವಿ


ಹಾಸನ: ‘ನಮ್ಮ ರಾಜ್ಯದ ಒಬ್ಬ ಹಿರಿಯ ರಾಜಕಾರಣಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತೋಷದ ವಿಷಯ. ಆದರೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ. ಬಿಜೆಪಿಗೆ ತೊಂದರೆಯೂ ಇಲ್ಲ, ಖರ್ಗೆ ಅವರೇನು ಪ್ರಧಾನಿ ಅಭ್ಯರ್ಥಿ ಅಲ್ಲವಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬುಧವಾರ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದೆಲ್ಲೆಡೆ ಸತತ ಸೋಲುಗಳಿಂದ ಮುಳುಗುತ್ತಿರುವ ಹಡಗಿನಂತಾಗಿದೆ. ಅದರಲ್ಲಿ ಇರುವವರು ಲೈಫ್ ಜಾಕೆಟ್ ಹಾಕಿಕೊಂಡರೆ ಮಾತ್ರ ಬದುಕಿ ಉಳಿಯಲು ಸಾಧ್ಯ. ಅಂತಹ ಹಡಗಿಗೆ ಮಲ್ಲಿಕಾರ್ಜುನ ಖರ್ಗೆ ಕ್ಯಾಪ್ಟನ್ ಆಗಿದ್ದಾರೆ ಎಂದರು.

ಖರ್ಗೆ ಅವರಿಗೆ ಸುಧೀರ್ಘ ರಾಜಕಾರಣದ ಅನುಭವ ಇದ್ದರೂ ಸ್ವಂತತ್ರವಾಗಿ ಕಾರ್ಯನಿರ್ವಹಿಸಲು ಸೋನಿಯಾಗಾಂಧಿ ಕುಟುಂಬ ಬಿಡುವುದಿಲ್ಲ. ಖರ್ಗೆ ಕೇವಲ ರಿಮೋಟ್ ಕಂಟ್ರೋಲ್ ರೀತಿ ಕೆಲಸ ಮಾಡಬೇಕಾತ್ತುದೆ. ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಅವರಿಗೆ ಆದ ಅವಮಾನವನ್ನು ಖರ್ಗೆ ಅವರು ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂಬ ಸಲಹೆ ನೀಡಿದರು.

‘ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಯಾವುದೇ ರಾಜಕೀಯ ಪರಿಣಾಮ ಬೀರುವುದಿಲ್ಲ. ಅಳಿವಿನಂಚಿನಲ್ಲಿರುವ ಒಂದು ಪಕ್ಷಕ್ಕೆ ಅಧ್ಯಕ್ಷರಾಗಿದ್ದಾರಷ್ಟೆ, ಪ್ರಧಾನಿ ಅಭ್ಯರ್ಥಿ ಅಲ್ಲವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿಕ್ಸರ್, ಫೋರ್ ಹೊಡೆಯುವವರಿಗೆ ಅವಕಾಶ ಸಿಗಲಿ:
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದು, ಹಾಸನದ ಶಾಸಕ ಪ್ರೀತಂಗೌಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಂತ್ರಿ ಸ್ಥಾನ ಕೊಟ್ಟರೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸರ್ಕಾರದ ಅವಧಿ ಇನ್ನು ಆರೇಳು ತಿಂಗಳಿದೆ. ಪಂದ್ಯ ಗೆಲ್ಲಿಸಲು ಯಾವಾಗಲೂ ಲಾಸ್ಟ್ ಓವರ್‌ನಲ್ಲಿ ಸಿಕ್ಸರ್, ಫೋರ್ ಹೊಡೆಯೋರು ಬೇಕಾಗುತ್ತದೆ. ಆರಂಭದಲ್ಲಿ ಡಿಫೆನ್ಸ್ ಆಡಿಕೊಂಡು ಹೋಗಬಹುದು, ಸ್ಲಾಗ್ ಓವರ್‌ಗಳಲ್ಲಿ ಆಕ್ರಮಣಕಾರಿ ಆಟ ಆಡಲೇಬೇಕಾಗುತ್ತದೆ. ಈಗ ಸಂಪುಟ ಪುನರ್ ರಚನೆ ಆದರೆ ಇರುವ ಆರೇಳು ತಿಂಗಳಲ್ಲಿ ಫೋರು, ಸಿಕ್ಸರ್ ಹೊಡೆದು ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರುವವರಿಗೆ ಅವಕಾಶ ಸಿಗಬೇಕು ಎಂದು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಿ ಜನಪರ ಕಾಳಜಿ ಮೆರೆದಿದ್ದಾರೆ. ಆದರೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವ ಹಾಗೆ ವಿಪಕ್ಷದವರು ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಸುನಕ್‌ಗೆ ಅಭಿನಂದನೆ:
ಭಾರತ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸಿ.ಟಿ. ರವಿ, 1947 ರಲ್ಲಿ ಭಾರತಕ್ಕೆ ಸ್ವಾತಂತ್ರೃ ನೀಡುವ ಸಂದರ್ಭದಲ್ಲಿ ಅಂದಿನ ಬ್ರಿಟನ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ‘ಭಾರತೀಯರಿಗೆ ಆಳಿಸಿಕೊಳ್ಳುವುದಷ್ಟೇ ಗೊತ್ತು, ಆಳುವ ಯೋಗತ್ಯೆ ಇಲ್ಲ’ ಎಂಬ ಕುಹಕದ ಮಾತುಗಳನ್ನಾಡಿದ್ದರು. ಆದರೆ ಕಳೆದ 75 ವರ್ಷಗಳಲ್ಲಿ ಭಾರತ ಸಮರ್ಥವಾಗಿ ಬೆಳೆದಿದೆ. ಭಾರತದ ಸ್ವಾತಂತ್ರೃದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಭಾರತೀಯ ಮೂಲದವರೊಬ್ಬರು ಬ್ರಿಟನ್ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡಿರುವುದು ಭಾರತ ಶಕ್ತಿಯ ಸಂಕೇತದಂತಿದೆ ಎಂದು ನುಡಿದರು.

ಒಬ್ಬ ಸಾಮಾನ್ಯ ಚಾಯ್‌ವಾಲಾ ಆಗಿದ್ದ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಭಾರತವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಜಗತ್ತು ಸಂಕಷ್ಟದಲ್ಲಿ ಇದ್ದಾಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ವ್ಯಾಕ್ಸಿನ್ ಸರಬರಾಜು ಮಾಡಿ ಭಭಾರತದ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿದ್ದಾರೆ. ನಶಿಸಿ ಹೋಗುತ್ತಿದ್ದ ಭಾರತೀಯ ಮೌಲ್ಯಗಳಿಗೆ ಪುನರ್‌ಜೀವ ನೀಡಿ ಭಾರತೀಯರನ್ನು ಒಂದುಗೂಡಿಸುತ್ತಿದ್ದಾರೆ. ಇದರು ಭಾರತೀಯರ ಶಕ್ತಿ ಎಂದರು.


ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಉಪಸ್ಥಿತರಿದ್ದರು.