ಜಿಲ್ಲೆ

ಖರ್ಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಿ

Bidar

ಬೀದರ್: ಕಲಬುರ್ಗಿಯಲ್ಲಿ ಡಿ. 10 ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಮನವಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಬರುತ್ತಿರುವ ಖರ್ಗೆ ಅವರಿಗೆ ಭವ್ಯ ಸ್ವಾಗತ ಕೋರಲು ಕಲಬುರ್ಗಿಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ಅಭಿನಂದನಾ ಸಮಾರಂಭ ಐತಿಹಾಸಿಕವಾಗಲಿದೆ ಎಂದು ಹೇಳಿದ್ದಾರೆ.
ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ ಜನಿಸಿದ ಖರ್ಗೆ ಅವರು ಶತಮಾನದ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಬೀದರ್‍ಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಪಶು ವೈದ್ಯಕೀಯ ವಿಶ್ವವಿದ್ಯಾಲಯ, ಹೊಸ ರೈಲುಗಳು ಸೇರಿದಂತೆ ಖರ್ಗೆ ಅವರು ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿನಂದನಾ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.