ಕಲಬುರಗಿ: ಕಾಂಗ್ರೆಸ್ ಪಕ್ಷ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಹಿಡಿತದಲ್ಲಿದೆ. ವಂಶವಾದ, ಸರ್ವಾಧಿಕಾರ ಆ ಪಕ್ಷದ ಮೂಲ ಗುಣವೇ ಆಗಿದ್ದು, ಗಾಂಧಿ ಕುಟುಂಬದ ಹಿಡಿತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲೇ ಕಾಂಗ್ರೆಸ್ ಅಂತ್ಯವಾಗಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭವಿಷ್ಯ ನುಡಿದರು.
ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದಿಂದ ಬುಧವಾರ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಖರ್ಗೆ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ದಿನೇ ದಿನೆ ಒಡಕು ಮೂಡುತ್ತಿದೆ. ಇಡೀ ದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೪೦೦ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲಿದ್ದು, ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ. ಇಂತಹ ವೇಳೆಯಲ್ಲಿ ಖರ್ಗೆ ಅವರಾದರೂ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಅಡ್ವರ್ಟೈಸ್ ಸರ್ಕಾರವಲ್ಲ, ಅಭಿವೃದ್ಧಿಯ ಸರ್ಕಾರವಾಗಿದ್ದು, ೧೦ ವರ್ಷದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದೆ. ೧೧ ಕೋಟಿ ಜನರಿಗೆ ಶೌಚಗೃಹ, ೧೦ ಕೋಟಿ ಜನರಿಗೆ ಉಜ್ವಲ್ ಗ್ಯಾಸ್, ನಾಲ್ಕು ಕೋಟಿಗೂ ಹೆಚ್ಚಿನ ಜನರಿಗೆ ಮನೆ ನಿರ್ಮಿಸಲಾಗಿದೆ. ೮೦ ಕೋಟಿ ಜನರಿಗೆ ಪ್ರತಿ ತಿಂಗಳೂ ಉಚಿತ ರೇಷನ್ ನೀಡಲಾಗುತ್ತಿದೆ. ೫೦ ಕೋಟಿ ಆಯುಷ್ಮಾನ್ ಕಾರ್ಡ್ ಮಾಡಿದ್ದು, ಫಲಾನುಭವಿಗಳು ಪ್ರತಿ ಮನೆಯಲ್ಲಿ ದೊರೆಯಲಿದ್ದಾರೆ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಲೋಕಸಭೆ ಕ್ಷೇತ್ರದ ಸಹ ಉಸ್ತುವಾರಿ ಶೋಭಾ ಬಾಣಿ, ಮೇಯರ್ ವಿಶಾಲ ದರ್ಗಿ, ಉಪಮೇಯರ್ ಶಿವಾನಂದ ಪಿಸ್ತಿ, ಉಮೇಶ ಪಾಟೀಲ್, ಸಿದ್ದಾಜಿ ಪಾಟೀಲ್, ಅಂಬಾರಾಯ ಅಷ್ಠಗಿ, ಮಹಾದೇವ ಬೆಳಮಗಿ, ಶಿವಕಾಂತ ಮಹಾಜನ್, ಧರ್ಮಣ್ಣ ಇಟಗಿ, ಗಿರಿರಾಜ ಯಳಮೇಲಿ, ವೀರಣ್ಣ ಹೊನ್ನಳ್ಳಿ, ಸಚಿನ ಕಡಗಂಚಿ, ಮಲ್ಲು ಉದನೂರು, ಅಪ್ಪು ಕಣಕಿ ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ, ಶಿವಾ ಅಷ್ಟಗಿ, ಇತರರಿದ್ದರು.