ಸಂಡೂರು: ನೀರು ಅತ್ಯಮೂಲ್ಯ ಸಂಪತ್ತಾಗಿದ್ದು ಮಿತವಾಗಿ ಬಳಸಬೇಕು. ಮುಂದೊಂದು ದಿನ ನೀರಿಗಾಗಿ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ದೇವರೆಡ್ಡಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ವಿಶ್ವಜಲ ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಸರಕು ಮತ್ತು ಸೇವೆಗಳನ್ನು ಸ್ವಂತಕ್ಕಾಗಿ ಖರೀದಿಸುವವರೇ ಗ್ರಾಹಕರಾಗಿದ್ದಾರೆ. ಖರೀದಿ ಮಾಡುವಾಗ ಅನೇಕ ರೀತಿಯಲ್ಲಿ ಮೋಸಗಳಾಗುತ್ತವೆ. ಏನೇ ಖರೀದಿಸಿದರೂ ರಸೀದಿ ತೆಗೆದುಕೊಳ್ಳಬೇಕು ಎಂದರು.
ವಕೀಲ ಡಿ.ನಾಗರಾಜ ಉಪನ್ಯಾಸ ನೀಡಿ, ಗ್ರಾಹಕರಿಗೆ ಮೋಸವಾದಲ್ಲಿ ಕಾನೂನು ಹೋರಾಟ ಮಾಡಬಹುದು. ಇದಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ವೇದಿಕೆಗಳಿದ್ದು, ಅನ್ಯಾಯವನ್ನು ಪ್ರಶ್ನಿಸಬಹುದು. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೆ ವಂಚನೆ ಮಾಡುವವರೂ ಇರುತ್ತಾರೆ. ನಿಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದರು.
ವಕೀಲ ಡಿ.ಮಲ್ಲಿಕಾರ್ಜುನ ವಿಶ್ವ ಜಲದಿನದ ಬಗ್ಗೆ ಉಪನ್ಯಾಸ ನೀಡಿ, ಪ್ರಪಂಚದಲ್ಲಿ ಶುದ್ಧ ಕುಡಿಯುವ ನೀರು ಶೇ.2.4 ರಷ್ಟಿದ್ದು, ಉಳಿದಿದ್ದೆಲ್ಲ ಉಪ್ಪು ನೀರು ಆಗಿದೆ. ನೀರಿನ ಮಹತ್ವ ಅರಿತು ಬಳಸಬೇಕು. ನಾರಿಹಳ್ಳ ಹಾಗೂ ಅನೇಕ ನದಿಗಳು ಮಲೀನವಾಗುತ್ತಿವೆ. ನೀರಿನಲ್ಲಿ ಇಳಿಯಲು ಕೂಡ ಹಿಂಜರಿಯುವ ಪರಿಸ್ಥಿತಿ ಇದೆ. ನೀರನ್ನು ಹಿತ-ಮಿತವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. 1993ರಿಂದ ವಿಶ್ವಜಲ ದಿನ ಆಚರಿಸಲಾಗುತ್ತಿದೆ ಎಂದರು.
ತಾಪಂ ಇಒ ರೇಣುಕಾಚಾರ್ಯ ಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹರಿಯುವ ನೀರನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆಯ ಎಇಇ ವಿನಾಯಕ, ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ, ಉಪಾಧ್ಯಕ್ಷ ಕೆ.ಆರ್.ದಾದಾಪೀರ್, ಕಾರ್ಯದರ್ಶಿ ಎಚ್.ಕುಮಾರಸ್ವಾಮಿ, ಮಂಜುನಾಥ ಗೌಡ, ರಾಜಶೇಖರ್, ಎಸ್.ಮಂಜುನಾಥ, ಇಂಡಿ ಮಹಾರುದ್ರಪ್ಪ, ಅಂಜಿನಪ್ಪ, ಹಿರಿಯ ವಕೀಲ ಟಿ.ಎಂ.ಶಿವಕುಮಾರ್, ಅಕ್ಷರ ದಾಸೋಹ ಎಡಿ ಶ್ರೀಧರ ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ ಇತರರಿದ್ದರು.