ಜಿಲ್ಲೆ

ಖರೀದಿ ಕೇಂದ್ರದಲ್ಲಿ ಅಕ್ರಮ ಕಂಡುಬಂದರೆ ಕ್ರಮ

ಬೆಳಗಾವಿ: ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರ ಸೂರ್ಯಕಾಂತಿ, ಹೆಸರು ಕಾಳು ಖರೀದಿಸಬಾರದು. ನೋಂದಣಿ ಮಾಡಿಕೊಂಡ ರೈತರ ಹೆಸರಿನ ಆಧಾರ್​ ಸಂಖ್ಯೆ ಜೋಡಣೆಯಾದ ಬ್ಯಾಂಕ್​ ಖಾತೆಗೆ ಮಾತ್ರ ಹಣ ಜಮೆ ಮಾಡಬೇಕು. ದುರಪಯೋಗ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ರಾಮದುರ್ಗ ಹಾಗೂ ಸವದತ್ತಿ ಟಿಎಪಿಸಿಎಂಎಸ್​ ಲಿಮಿಟೆಡ್​ ಎರಡು ಸೂರ್ಯಕಾಂತಿ ಖರೀದಿ ಕೇಂದ್ರ ಹಾಗೂ ರಾಮದುರ್ಗ, ಹುಲಕುಂದ, ಸವದತ್ತಿ, ಮುರಗೋಡ, ಯರಗಟ್ಟಿ, ಬೈಲಹೊಂಗಲ, ದೊಡವಾಡ ಸೇರಿ ಏಳು ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ಈ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಿದರು.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ 47,000 ಹಾಗೂ ಹೆಸರು ಕಾಳು 2,47,500 ಕ್ವಿಂಟಾಲ್​ ಇಳುವರಿ ನಿರೀೆ ಇದೆ. ಪ್ರತಿ ಎಕರೆಗೆ ಕನಿಷ್ಠ 3 ರಿಂದ15 ಕ್ವಿಂಟಾಲ್​ ಸೂರ್ಯಕಾಂತಿ, 2 ರಿಂದ 10 ಕ್ವಿಂಟಾಲ್​ ಹೆಸರು ಕಾಳು ಖರೀದಿ ಪ್ರಮಾಣ ನಿಗದಿ ಪಡಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ (ಕೆಓಎಫ್​) ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ, ನಾಫೆಡ್​ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಗುರುತಿಸಲಾಗಿದೆ. ಹಾಗಾಗಿ ಜಿಲ್ಲಾ ಟಾಸ್ಕ್​ ಫೋರ್ಸ್​ ಸಮಿತಿ ಜಿಲ್ಲೆಯಲ್ಲಿ ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ನಾಫೆಡ್​ ಸಂಸ್ಥೆಯೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.