ಬನ್ನೂರು: ರೈತರ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ಖರೀದಿ ಕೇಂದ್ರಗಳು ಆರಂಭವಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲಸಂಘಟನೆ) ಸದಸ್ಯರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂತೇಮಾಳದ ಬಸವೇಶ್ವರ ವೃತ್ತದ ಬಳಿಯಲ್ಲಿ ಬುಧವಾರ ಮೈಸೂರು ಮಳವಳ್ಳಿಯ ಮುಖ್ಯರಸ್ತೆಯಲ್ಲಿ ವಾಹನ ತಡೆದು, ರಸ್ತೆಗೆ ಭತ್ತ ಸುರಿದು ಪ್ರತಿಭಟಿಸಿದರು.
ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಬೇಕು. ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗುವಂತೆ ನಾಲೆಗಳಿಗೆ ನೀರು ಬಿಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರೈತರು ಭತ್ತ ಕಟಾವು ಮಾಡಿದರೂ ಇನ್ನೂ ಅಧಿಕಾರಿಗಳು ಭತ್ತ ಖರೀದಿ ಮಾಡಿಲ್ಲ. ಖರೀದಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಪ್‌ಸೆಟ್‌ಗಳಿಗೆ ಸಂಬಂಧಿಸಿದಂತೆ 4ರಿಂದ 5 ಗಂಟೆ ವಿದ್ಯುತ್ ನೀಡುತ್ತಿರುವುದರಿಂದ ನೀರು ಸಾಲದೆ ಬೆಳೆ ಒಣಗುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ರೈತರು ಬೆಳೆಯನ್ನು ಕಟಾವು ಮಾಡಿದ್ದು, ಬೇಸಿಗೆ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ನೀರಾವರಿಯ ಅಧಿಕಾರಿಗಳು ತಕ್ಷಣವೇ ರೈತ ಮುಖಂಡರ ಸಭೆಯನ್ನು ಕರೆದು ನಾಲೆಗಳಿಗೆ ನೀರು ಹಾಯಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಭತ್ತ ಖರೀದಿ ಕೇಂದ್ರದ ಅಧಿಕಾರಿ ವಾಣಿ ಅವರು ರೈತರ ಅಹವಾಲನ್ನು ಸ್ವೀಕರಿಸಿ ಮಾತನಾಡಿ, ಸರ್ಕಾರ ರೈತರ ಭತ್ತ, ರಾಗಿ ಬೆಳೆಯನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಡಿಬಿಟಿ ಮೂಲಕ ಹಣ ಸಂದಾಯ ಮಾಡಬೇಕೆಂಬ ತಂತ್ರಾಂಶವನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ್ದು, ಅದು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ರೈತರಿಂದ ಭತ್ತ, ರಾಗಿ ಖರೀದಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರಂಗಸ್ವಾಮಿ, ಶಿವರಾಮು, ಶಂಕರ್, ಬನ್ನೂರು ಸೂರಿಮ ನಂಜನಗೂಡಿನ ಸಿದ್ದು, ಲಕ್ಷ್ಮಣ್, ಯೋಗೇಶ್, ತಮ್ಮಯ್ಯ, ಸ್ವಾಮಿ, ಶ್ರೀನಿವಾಸ್, ಜಯರಾಮು, ಮಂಜು, ದೊಳ್ಳಯ್ಯ ಇತರರಿದ್ದರು.