ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಶ್ರೀಸಿದ್ದೇಶ್ವರ ದೇವಸ್ಥಾನದ ಎರಡು ಗುಂಪಿನ ಅರ್ಚಕರ ಸಭೆಯನ್ನು ತಹಸೀಲ್ದಾರ್ ಮಂಜುಳಾ ನಡೆಸಿದರು. 
ಜಿಲ್ಲೆ

ಖಜಾನೆ ಸೇರಿದ ದೇವಸ್ಥಾನದ ಆಭರಣ, ಹುಂಡಿ ಹಣ

ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಶ್ರೀಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ಧರಿಸಿದ್ದ ಆಭರಣ ಹಾಗೂ ಜಾತ್ರೆಯಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣವನ್ನು ತಹಸೀಲ್ದಾರ್ ಮಂಜುಳಾ ಖಜಾನೆ ವಶಕ್ಕೆ ತೆಗೆದುಕೊಂಡರು.
ಮುಜರಾಯಿ ಇಲಾಖೆಗೆ ಸೇರಿರುವ ಸಿದ್ದೇಶ್ವರ ದೇವಸ್ಥಾನದ ಪೂಜೆ ವಿಚಾರವಾಗಿ ಹಿಂದಿನಿಂದಲೂ ಎರಡು ಗುಂಪುಗಳ ಅಸಮಾಧಾನವಿದ್ದು, ಈ ಹಿಂದೆ ಎರಡು ಗುಂಪುಗಳ ನಡುವೆ ಮಾರಾಮಾರಿ ಏರ್ಪಟ್ಟು ಈ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೆಲವರು ನ್ಯಾಯಾಂಗ ಬಂಧನಕ್ಕೂ ಒಳಪಟ್ಟಿದ್ದರು.
ಏ.5ರಿಂದ 8 ವರೆಗೆ ನಡೆದ ಶ್ರೀಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಿಪಿಐ ಕೃಷ್ಣಪ್ಪ, ಗ್ರಾಮಾಂತರ ಠಾಣೆ ಪಿಎಸ್‌ಐ ಗ್ರಾಮದ ಯಜಮಾನರು ಹಾಗೂ ವಿವಿಧ ಸಮುದಾಯ ಮುಖಂಡರ ಜತೆ ಸಭೆ ನಡೆಸಿ ಜಾತ್ರೆಯನ್ನು ಶಾಂತಿಯುತವಾಗಿ ನಡೆಸುವಂತೆ ಸೂಚನೆ ನೀಡಿದ್ದರು. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.
ನಂತರ ಏ.5ರಂದು ಶ್ರೀಸಿದ್ದೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಆದರೆ, ಏ.6 ರಾತ್ರಿ ಕೊಂಡೋತ್ಸವ ಪ್ರಕ್ರಿಯೆಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಏರ್ಪಟಿತ್ತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಸೋಮೇಗೌಡ, ತಹಸೀಲ್ದಾರ್ ಮಂಜುಳಾ ಸಮಸ್ಯೆ ತಿಳಿಗೊಳಿಸಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಿಸಿದ್ದರು. ಮಾರನೆ ದಿನ ಮುಂಜಾನೆ ಕೊಂಡೊತ್ಸವ ಯಶಸ್ವಿಯಾಗಿ ನಡೆಯಿತು.
ಶನಿವಾರ ರಾತ್ರಿ ದೇವರ ಬೀಳ್ಕೊಡುಗೆ ಮೆರವಣಿಗೆ ನಡೆಸಿದ ಬಳಿಕ ದೇವರಮೂರ್ತಿ, ಸತ್ತಿಗೆಯ ಆಭರಣ, ಹುಂಡಿ ಹಣವನ್ನು ಎರಡು ಗುಂಪಿನ ಅರ್ಚಕರು ನಮ್ಮ ವಶಕ್ಕೆ ನೀಡಬೇಕೆಂದು ಒತ್ತಡ ಹಾಕಿದ್ದರು.
ಸೋಮವಾರ ತಹಸೀಲ್ದಾರ್ ಮಂಜುಳಾ, ಪಿಎಸ್‌ಐ ಗಣೇಶ್ ಗ್ರಾಮದ ಮುಖಂಡರ ಸಭೆ ನಡೆಸಿ ಎರಡು ಗುಂಪುಗಳ ವೈಮನಸ್ಸಿನಿಂದ ಅಶಾಂತಿ ಉಂಟಾಗುತ್ತದೆ. ಸದ್ಯಕ್ಕೆ ದೇವರ ಮೂರ್ತಿಯ ಆಭರಣ ಮತ್ತು ಹುಂಡಿ ಹಣವನ್ನು ಖಜಾನೆ ವಶಕ್ಕೆ ನೀಡಲಾಗುವುದು. ಚುನಾವಣೆ ಬಳಿಕ ಗ್ರಾಮದಲ್ಲಿ ಸಭೆ ನಡೆಸಿ ಕ್ರಮ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.