ಚಿತ್ರದುರ್ಗ: ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 10 ಕೋಟಿ ರೂ. ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಮುರುಘಾಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ವಿತರಕರ ರಾಜ್ಯಮಟ್ಟದ 4ನೇ ಸಮ್ಮೇಳನದಲ್ಲಿ ಮಾತನಾಡಿ, ಕ್ಷೇಮಾಭಿವೃದ್ಧಿ ನಿಧಿ ಮೊತ್ತವನ್ನು 2 ಕೋಟಿಯಿಂದ 10 ಕೋಟಿ ರೂ.ಗೆ ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡುವೆ ಎಂದರು.
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ವಿತರಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಮೂಲಕ ಅವರ ಕಷ್ಟಕ್ಕೆ ಮಿಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ. ಸರ್ಕಾರ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಇನ್ನಿತರ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ಪತ್ರಿಕಾ ವಿತರಕರ ಬಂಧು-ಬಿರುದು ಪ್ರದಾನ ಮಾಡಲಾಯಿತು. ಅವರ ಪರವಾಗಿ ಪ್ರಭಾಕರ್ ಸ್ವೀಕರಿಸಿದರು.
ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ವಿತರಕರು ಶ್ರದ್ಧೆಯಿಂದ ಜನರಿಗೆ ಜ್ಞಾನವನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕೆಲಸವನ್ನು ಸರ್ಕಾರಗಳು ಗುರುತಿಸಬೇಕು. ವಿತರಕರಿಗೆ ಬೈಕ್, ವಸತಿಗೆ ಆರ್ಥಿಕ ನೆರವು ನೀಡಬೇಕು, ಉಚಿತವಾಗಿ ನಿವೇಶನ ಕೊಡಬೇಕೆಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಇಂದಿನ ಮಾಧ್ಯಮ ಭರಾಟೆಯಲ್ಲಿ ಯಾವುದು ಅಸಲಿ-ನಕಲಿ ಎಂಬ ಗೊಂದಲ ಸೃಷ್ಟಿಯಾಗಿದೆ. ಆದಾಗ್ಯೂ ಮುದ್ರಣ ಮಾಧ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ತಿಳಿಸಿದರು.
ಟಿವಿ, ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿ ಡಿಲಿಟ್ ಮಾಡಲು ಸಾಧ್ಯವಿ., ಆದರೆ. ಪತ್ರಿಕೆಯಲ್ಲಿ ಸಾಧ್ಯವಾಗದು. ಜನತಂತ್ರದ ನಿಜರೂಪ ಪತ್ರಿಕೋದ್ಯಮವನ್ನು ಉಳಿಸಿ-ಬೆಳೆಸುವ ಕೆಲಸ ವಾಗಬೇಕಿದೆ. ಈ ಕ್ಷೇತ್ರದಲ್ಲಿ ಸಂಪಾದಕೀಯ ಮಂಡಳಿಗಿಂತ,ಜಾಹೀರಾತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ಚಿತ್ರದುರ್ಗದಲ್ಲಿ ವಿತರಕರಿಗೆ ಹಂಚಿಕೆಯಾದ 24 ಸೈಟ್‌ಗಳನ್ನು ಅವರ ಹೆಸರಿಗೆ ಮಾಡಿಕೊಡುವಂತೆ ಹಾಗೂ ಉಳಿದವರಿಗೂ ನಿವೇಶನ ಮಂಜೂರು ಮಾಡುವಂತೆ ಸಚಿವ ಸುಧಾಕರ್ ಹಾಗೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಒತ್ತಾಯಿಸಿದರು.
ನಮ್ಮ ಸಂಘಟನೆ ವಿತರಕರ ದನಿಯಾಗಿದೆ. ಹಿರಿಯರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ರವಿ ಹೆಗಡೆ, ಚನ್ನೇಗೌಡ ಸೇರಿ ಹಲವರು ಸಂಘಟನೆಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ವಿತರಕರನ್ನು ಕೈಹಿಡಿದಿದ್ದು ಪತ್ರಿಕಾ ಸಂಸ್ಥೆಗಳು ಮಾತ್ರ ಎಂದರು.
ಹಿರಿಯ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಸಕಾಲಕ್ಕೆ ಬಿಲ್ ಪಾವತಿಸದೆ ವಿತರಕರನ್ನು ಸತಾಯಿಸುವ ಕೆಲವು ಓದುಗರೂ ಇದ್ದಾರೆ. ಸಾಮಾಜಿಕ ಜಾಲತಾಣಗಳು ಪತ್ರಿಕಾ ಮಾಧ್ಯಮವನ್ನು ಕೊಲ್ಲುತ್ತಿವೆ. ಇವುಗಳಿಂದ ಎರವಲು ಪಡೆದ ಸುದ್ದಿಗಳ ಬದಲು ವೈವಿಧ್ಯಮಯ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಸವಾಲು ನಮ್ಮ ಎದುರಿದೆ. ಪತ್ರಿಕಾ ಮಾಲೀಕರ ಮಧ್ಯೆ ಆರೋಗ್ಯಕರ ಪೈಪೋಟಿ ಇರಬೇಕು. ಜಾಹೀರಾತು ವಿಚಾರದಲ್ಲಿ ಮೌಲ್ಯಮಾಪನದ ಅಗತ್ಯವಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮಳೆ, ಚಳಿ, ಬಿಸಿಲೆನ್ನದೆ ಕೆಲಸ ಮಾಡುವ ಪತ್ರಿಕಾ ವಿತರಕರ ಬಗ್ಗೆ ಸರ್ಕಾರದ ಗಮನ ಸೆಳೆದು, ಒತ್ತಡ ಹಾಕಿದ್ದರಿಂದಲೇ ಅವರಿಗಾಗಿ ಕಾರ್ಮಿಕ ಇಲಾಖೆಯಲ್ಲಿ ಇ-ಶ್ರಮ ಯೋಜನೆ ಜಾರಿಗೆ ಬಂತು. ರಾಜ್ಯೋತ್ಸವ ಪ್ರಶಸ್ತಿಗೂ ವಿತರಕರನ್ನು ಪರಿಗಣಿಸಲಾಯಿತು ಎಂದು ಹೇಳಿದರು.
ತಮ್ಮ ಪಾಡಿಗೆ ಅಲ್ಲಲ್ಲಿ ಹಂಚಿಹೋಗಿದ್ದ ವಿತರಕರನ್ನು ಸಂಘಟಿಸುವ ನಿಟ್ಟಿನಲ್ಲಿ ಶಂಭುಲಿಂಗ ನೇತೃತ್ವದ ತಂಡ ಶ್ರಮ ಅಪಾರವಾಗಿದೆ. ಶ್ರಮದಿಂದ ಕೆಲಸ ಮಾಡಿದರೆ ಯಾವುದೇ ವೃತ್ತಿಯೂ ಕೀಳಲ್ಲ. ಅದನ್ನು ಅರಿತು, ಸಂಘಟಿತರಾದರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಸಾಣೇಹಳ್ಳಿ ಶ್ರೀ, ಭೋವಿ ಶ್ರೀ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಸಂಸದ ಗೋವಿಂದ ಎಂ.ಕಾರಜೋಳ, ಐಎಫ್‌ಡಬ್ಲುೃಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಇತರರು ವಿತರಕರ ಕಾರ್ಯವನ್ನು ಶ್ಲಾಘಿಸಿದರು. ವಿತರಕರು ನಿಜವಾದ ಕಾಯಕ ಜೀವಿಗಳು, ಸ್ವಾಭಿಮಾನಿಗಳು. ವೃತ್ತಿ ಬಗ್ಗೆ ಕೀಳರಿಮೆ ಬೇಡ. ಮಾಜಿ ರಾಷ್ಟ್ರಪತಿ ಅಬ್ದುಲ್‌ಕಲಾಂ ಕೂಡ ಪತ್ರಿಕೆ ವಿತರಿಸಿದ್ದರು. ನಿಮ್ಮ ವೃತ್ತಿಯನ್ನು ಗೌರವದಿಂದ ಮುಂದುವರಿಸಿ ಎಂದು ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಎಂಎಲ್‌ಸಿ ಕೆ.ಎಸ್.ನವೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರಿನ ಜವರಪ್ಪ, ವಿತರಕರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಆಪ್ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಕುಡಾ ಅಧ್ಯಕ್ಷ ಎಂ.ಕೆ.ತಾಜಪೀರ್, ಪ್ರಕಾಶ್‌ನಾಯ್ಕ, ವೀರಭದ್ರ ಬಾಬು, ಮಲ್ಲಿಕಾರ್ಜುನಪ್ಪ ಇತರರಿದ್ದರು.
ಪತ್ರಿಕಾ ವಿತರಕ ಹುಲಿಕುಂಟೆ ಮಹೇಶ್ ಪುತ್ರಿ ಭೈರವಿ ಬಾಲನಟಿಯಾಗಿ ಅಭಿನಯಿಸಿರುವ ಸರ್ಕಾರಿ ಶಾಲೆ ಕುರಿತ ನುಡಿಮುತ್ತು ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ವಿತರಕ ನಾಗರಾಜಶೆಟ್ಟಿ ಪುತ್ರಿ ನಿಹಾರಿಕಾ ಭರತನಾಟ್ಯ ಪ್ರದರ್ಶನ ನೀಡಿದಳು. ಏಕಾಂತಪ್ಪ ಸ್ವಾಗತಿಸಿದರು.
*ಹಲವು ಹಕ್ಕೋತ್ತಾಯ
ಪತ್ರಿಕಾ ವಿತರಕರ ಸಮ್ಮೇಳನ ವಿತರಕರ ಹಿತ ಕಾಯಲು ಸಂಕಲ್ಪ ಮಾಡಿತು. ಆರೋಗ್ಯ ವಿಮೆ, ದ್ವಿಚಕ್ರ ವಾಹನ ಖರೀದಿಗೆ ಶೇ.50 ಸಬ್ಸಿಡಿ, ಪಡಿತರ ಚೀಟಿ, ನಿವೇಶನ, ಮನೆ ಕಟ್ಟಲು ಕಡಿಮೆ ಬಡ್ಡಿ ದರದ ಸಾಲ ಮತ್ತಿತರ ಸೌಲಭ್ಯ ಒದಗಿಸಬೇಕೆಂದು ಸಮ್ಮೇಳನದಲ್ಲಿ ಹಕ್ಕೋತ್ತಾಯ ಮಂಡಿಸಲಾಯಿತು.
ಬಾಕ್ಸ್ ಅದ್ದೂರಿ ಜಾಥಾ
ಪತ್ರಿಕಾ ವಿತರಕರ ರಾಜ್ಯಸಮ್ಮೇಳನದ ಅಂಗವಾಗಿ ಸ್ವರ್ಗ ನಮ್ಮ ದುರ್ಗ, ಈ ಬಾರಿ ನಡೆಯಲಿದೆ ವಿತರಕರ ಹಬ್ಬ, ಸಂಭ್ರಮಿಸೋಣ ನಾವೆಲ್ಲರೂ ಎಂಬ ಶೀರ್ಷಿಕೆಯಡಿ ಚಿತ್ರದುರ್ಗದಲ್ಲಿ ಪತ್ರಿಕಾ ವಿತರಕರ ಜಾಥಾ ನಡೆಯಿತು. ನೀಲಕಂಠೇಶ್ವರ ದೇಗುಲದ ಮುಂಭಾಗ ಜಾಥಾಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಸೇರಿ ಸಾವಿರಾರು ವಿತರಕರು ಭಾಗವಹಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಅಂಬೇಡ್ಕರ್ ವೃತ್ತದವರೆಗೆ ಸಾಗಿ, ಅಂಬೇಡ್ಕರ್ ಅವರ ಪ್ರತಿಮೆಗೆ ಮಾ ಲಾರ್ಪಣೆ ಮಾಡಿ, ಗೌರವ ಸಲ್ಲಿಸುವುದರೊಂದಿಗೆ ಜಾಥಾ ಸಮಾಪನಗೊಂಡಿತು.
*ಕೋಟ್
ಸುದ್ದಿಗಳಲ್ಲಿ ಯಾವುದು ಸತ್ಯ-ಮಿಥ್ಯ ಎಂಬ ಜಿಜ್ಞಾಸೆ ನಡುವೆ ಇದ್ದುದರಲ್ಲೇ ಮುದ್ರಣ ಮಾಧ್ಯಮ ನಂಬಿಕೆ ಉಳಿಸಿಕೊಂಡಿದೆ. ವಿತರಕರ ಕೆಲಸವನ್ನು ಗುರುತಿಸಿ ಅವರಿಗೆ ಬೈಕ್, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಬೇಕು.
ಡಾ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ
*ಕೋಟ್
ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ ಮುಂದುವರಿಸಬೇಕು. ಕ್ಷೇಮ ನಿಧಿ ಮೊತ್ತವನ್ನು 10 ಕೋಟಿ ರೂ.ಗೆ ಹೆಚ್ಚಿಸಬೇಕು.ಮಾಧ್ಯಮ ಅಕಾಡೆಮಿ, ಪ್ರೆಸ್‌ಕ್ಲಬ್ ಪ್ರಶಸ್ತಿಗೆ ಪರಿಗಣಿಸಬೇಕು. ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯ ಸ್ಥಾನ ಒದಗಿಸಬೇಕು.
ಕೆ.ಶಂಭುಲಿಂಗ, ರಾಜ್ಯಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ
ಸಂಕೇಶ್ವರರ ಕ್ರಾಂತಿ
ಡಾ.ವಿಜಯಸಂಕೇಶ್ವರ ಅವರು ಪತ್ರಿಕಾರಂಗದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ಅವರಿಗೆ ಸೋಲಿಲ್ಲ.ಅದಕ್ಕೆ ಅವರಿಗಿರುವ ಕಾಯಕ ಶ್ರದ್ಧೆ ಕಾರಣ ಎಂದು ಸಾಣೇಹಳ್ಳಿ ಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರೆ, ಅವರು ಪತ್ರಿಕೆ ಆರಂಭಿಸದಿದ್ದರೆ ನನ್ನಂಥ ಅನೇಕರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೆ.ವಿ.ಪ್ರಭಾಕರ್ ಸ್ಮರಿಸಿದರು.