ಜಿಲ್ಲೆ

ಕ್ಷೇಮ ನಿಧಿಗೆ ಚೆಕ್ ಹಸ್ತಾಂತರ

ಚನ್ನರಾಯಪಟ್ಟಣ : ಸಮಾಜದ ಏಳಿಗೆಗೆಂದೇ ಸದಾ ಶ್ರಮಿಸುವ ಬಹುತೇಕ ಪತ್ರಕರ್ತರ ಬದುಕು ಹೇಳಿಕೊಳ್ಳುವಷ್ಟು ಆರ್ಥಿಕವಾಗಿ ಸದೃಢವಾಗಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕ್ಷೇಮ ನಿಧಿಗೆ ಚೆಕ್ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿ, ಕ್ಷೇಮ ನಿಧಿ ಸಂಗ್ರಹ ಸಂಗ್ರಹದಿಂದ ಪತ್ರಕರ್ತರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಅಪಘಾತ, ಅನಾರೋಗ್ಯ, ಪ್ರಾಣಹಾನಿ ಹಾಗೂ ಇತರೇ ತೊಂದರೆಗಳು ಎದುರಾದಲ್ಲಿ ಕ್ಷೇಮ ನಿಧಿ ಸದ್ಬಳಕೆಯಾಗಲಿದೆ. ಅಲ್ಲದೆ ಸರ್ಕಾರ ಬಸ್ ಪಾಸ್, ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳನ್ನು ಕಲ್ಪಿಸುವ ಮೂಲಕ ನೆರವಾಗಬೇಕಿದೆ ಎಂದು ಮನವಿ ಮಾಡಿದರು.


ಕರೋನಾ ವೇಳೆ ತಮ್ಮ ಬದುಕನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿಸಿದ್ದು ಹತ್ತಾರು ಪತ್ರಕರ್ತರು ಮಹಾಮಾರಿಗೆ ಸಿಲುಕಿ ಮೃತಪಟ್ಟಿರುವುದು ದುಃಖಕರ ಸಂಗತಿ. ಅಂತಹ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ಸಹಾಯಧನ ಕೊಡಿಸುವಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಕಾರ್ಯವೈಖರಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘಟನೆ ಬೆಳೆದರೆ ನಾನು ಬೆಳೆಯುತ್ತೇವೆ. ಪತ್ರಕರ್ತರಾದ ನಾವು ಮಾಡುವ ಕೆಲಸ ಸಮಾಜಮುಖಿಯಾಗಿರಬೇಕು. ನಿಷ್ಠೆಯ ಕೆಲಸ ನಮ್ಮನ್ನು ಗುರುತಿಸುವುದರ ಜತೆಗೆ ಗೌರವ ಹೆಚ್ಚಿಸುತ್ತದೆ ಎಂದರು.

ತಾಲೂಕು ವ್ಯಾಪ್ತಿಯ ವಿಎಸ್‌ಎಸ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸಂಗ್ರಹಗೊಂಡಿದ್ದ 11 ಲಕ್ಷ ರೂ. ಮೌಲ್ಯದ ಚೆಕ್ ಗಳನ್ನು ಶಾಸಕ ಸಿ.ಎನ್.ಬಾಲಕೃಷ್ಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ತಾಲೂಕು ಅಧ್ಯಕ್ಷ ಎಂ.ಎಂ.ಜಯರಾಮ್ ಅವರಿಗೆ ಹಸ್ತಾಂತರಿಸಿದರು. ಸಂಘದ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.

ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಭಿಲಾಶ್, ಹಾಲು ಉತ್ಪಾದಕರ ಸಹಕಾರ ಸಂಘಗಳ ವಿಸ್ತರಣಾಧಿಕಾರಿ ಮಧು, ಆರ್ ಎಂಸಿ ನಿರ್ದೇಶಕ ಅನಿಲ್, ಹಿರಿಯ ಪತ್ರಕರ್ತರಾದ ಎಚ್.ಬಿ.ಮದನಗೌಡ, ಅಶೋಕ್ ಕುಮಾರ್, ಸಂಘದ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷ ಪುಟ್ಟರಾಜ್, ನಿರ್ದೇಶಕರಾದ ಎಂ.ಎಲ್.ನಾಗೇಶ್, ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ನಾಗೇಂದ್ರ, ಪಾಂಡುರಂಗ, ಸದಸ್ಯರಾದ ಸಿದ್ದರಾಜ್, ನಟೇಶ್, ನಂದನ್, ಲೋಹಿತ್, ಹಿ.ಕೃ.ಚಂದ್ರು ಹಾಗೂ ಇತರರು ಇದ್ದರು.