ಹುಮನಾಬಾದ್ ತಾಲೂಕಿನ ಡಾಕುಳಗಿಯಲ್ಲಿ ಬುಧವಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಿಸಲಾಯಿತು. ಸಂಸದ ಸಾಗರ ಖಂಡ್ರೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಇತರರಿದ್ದರು. 
ಜಿಲ್ಲೆ

ಕ್ಷೇತ್ರದಲ್ಲಿ ಹೆಚ್ಚಿನ ಮನೆ ತರಲು ಪ್ರಾಮಾಣಿಕ ಪ್ರಯತ್ನ

ಹುಮನಾಬಾದ್: ಬೀದರ್ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇನ್ನೂ ಹೆಚ್ಚಿನ ಮನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಡಾಕುಳಗಿ, ಸೀತಾಳಗೇರಾ, ಮದರಗಾಂವ, ಬೇನಚಿಂಚೋಳ್ಳಿ, ನಂದಗಾಂವ ಹಾಗೂ ಹುಡಗಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಸೂರು ಒದಗಿಸಿ ಕೊಡುವುದಕ್ಕಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಗೊಂಡಿರುವ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ವಿಶೇಷ ಪ್ರಯತ್ನದ ಫಲವಾಗಿ ಈ ಬಾರಿ ಬೀದರ್ ಕ್ಷೇತ್ರಕ್ಕೆ ಹೆಚ್ಚಿನ ಗೃಹ ನಿರ್ಮಾಣ ಗುರಿ ನೀಡಲಾಗಿದೆ, ಫಲಾನುಭವಿಗಳ ಕನಸಿನ ಮನೆಯ ಶುಭಾರಂಭಕ್ಕೆ ಶುಭ ಹಾರೈಸಿದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಬಡವರಿಗೆ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕ್ಷೇತ್ರದಲ್ಲಿ ಫಲಾನುಭವಿಗಳ ಆಯ್ಕೆಗೊಂಡಿದ್ದು, ಫಲಾನುಭವಿಗಳು ಯಾವುದೇ ಮಧ್ಯೆ ವರ್ತಿಗಳಿಗೆ ಹಣ ನೀಡಬಾರದು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುದಾನ ಒದಗಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದಿಂದ ಹಣವು ನಿಮ್ಮ ಖಾತೆಗೆ ನೇರವಾಗಿ ಜಮೆಯಾಗುವುದರಿಂದ ಯಾರು ಕೂಡ ಒಂದು ರೂಪಾಯಿ ಕೊಡುವ ಅವಶ್ಯಕತೆವಿಲ್ಲ ಎಂದು ತಿಳಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ, ವಸತಿ ತಾಲೂಕು ನೋಡಲ್ ಅಧಿಕಾರಿ ರವಿ ಸಿಂಗಾರೆ ಇತರರಿದ್ದರು.