ಹಂಗಳ ಗ್ರಾಮದ ಆದಿಜಾಂಬವ ಜನಾಂಗದ ಬಡಾವಣೆಯಲ್ಲಿ ಗುರುವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ಭೂಮಿ ಪೂಜೆ ನೆರವೇರಿಸಿದರು. ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ, ಸದಸ್ಯ ನಂದೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಮುಖಂಡರಾದ ಎಚ್.ಸಿ.ಸಿದ್ದರಾಜಪ್ಪ, ಎಂ.ಸಿ.ನಾಗರಾಜು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಬಸವೇಶ್, ರಾಜಪ್ಪ ಹಲವರು ಇದ್ದರು. 
ಜಿಲ್ಲೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿಕೆ > ಹಂಗಳದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ


ಗುಂಡ್ಲುಪೇಟೆ: ಮನಸ್ಸಿಟ್ಟು ಕೆಲಸ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ತಾಲೂಕಿನ ಹಂಗಳ ಗ್ರಾಮದ ಆದಿಜಾಂಬವ ಜನಾಂಗದ ಬಡಾವಣೆಯಲ್ಲಿ ಗುರುವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರಲಿಲ್ಲ. ಅಧಿಕಾರಕ್ಕೆ ಬಂದಾಗ ಎರಡು ವರ್ಷ ಕರೋನಾದಿಂದಾಗಿ ಯಾವುದೇ ಅನುದಾನ ಇಲ್ಲದ ಕಾರಣ ಅಭಿವೃದ್ಧಿಗೆ ತಡೆಯಾಗಿತ್ತು. ಒಂದು ವರ್ಷದಿಂದ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಜನರು ವಾಸಿಸುವ ಕಲಿಗೌಡನಹಳ್ಳಿ, ಕಬ್ಬಹಳ್ಳಿ, ಚಿಕ್ಕಾಟಿ, ತೊಂಡವಾಡಿ, ರಂಗನಾಥಪುರ, ಸಂಗೇಗೌಡನ ಹುಂಡಿ, ಮಲ್ಲಯ್ಯನಪುರ, ತೆಂಕಲಹುಂಡಿ, ಶಿವಪುರ, ಬಾಚಹಳ್ಳಿ ಮುಂತಾದ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 50 ಗ್ರಾಮಗಳ ಸಾಮಾನ್ಯ ವರ್ಗದ ಜನರ ಬೀದಿಗಳಿಗೂ 50 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಎಲ್ಲ ಗ್ರಾಮಗಳಿಗೂ ಆಯಾ ವರ್ಗಗಳ ಜನರ ಬೇಡಿಕೆಗನುಸಾರ ಅಂಬೇಡ್ಕರ್, ಬಾಬು ಜಗಜೀವನರಾಂ, ವಿಶ್ವಕರ್ವ, ಭಗೀರಥ , ಬಸವ ಭವನ ನಿರ್ಮಿಸಲಾಗಿದೆ. ಕಳೆದ 25 ವರ್ಷದಲ್ಲಿ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿದ್ದರೆ ಇಷ್ಟು ಕೆಲಸ ಏಕೆ ಬಾಕಿಯುಳಿದಿತ್ತು ಎಂದು ಪ್ರಶ್ನಿಸಿದರು.

1994ರಲ್ಲಿ ಬೊಮ್ಮಲಾಪುರದಲ್ಲಿ ಎಸ್‌ಟಿ ವರ್ಗದ 250 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದರೂ ಇದೂವರೆಗೂ ನಿವೇಶನ ನೀಡಿರಲಿಲ್ಲ. ಆದರೆ ತಾವು ಖುದ್ದಾಗಿ ಆಸಕ್ತಿವಹಿಸಿ ಸ್ಥಳ ಗುರುತಿಸಿದ ಪರಿಣಾಮ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಹಂಗಳದಂತಹ ದೊಡ್ಡ ಗ್ರಾಮದಲ್ಲಿಯೂ ನಿವೇಶನಗಳಿಗೆ ತೀವ್ರ ಬೇಡಿಕೆಯಿದ್ದು, ಕಳೆದ ವಾರ 94 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ನಿವೇಶನ ನೀಡಲು ಇನ್ನೂ 2 ಎಕರೆ ಪ್ರದೇಶ ಗುರುತಿಸಲಾಗಿದೆ. ತಾಲೂಕಿನ 110 ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಶೀಘ್ರ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ, ಸದಸ್ಯ ನಂದೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಮುಖಂಡರಾದ ಎಚ್.ಸಿ.ಸಿದ್ದರಾಜಪ್ಪ, ಎಂ.ಸಿ.ನಾಗರಾಜು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಬಸವೇಶ್, ರಾಜಪ್ಪ ಹಲವರು ಇದ್ದರು.