ಕೆ.ಎಂ.ದೊಡ್ಡಿ ಸಮೀಪದ ಅಂಬರಹಳ್ಳಿ ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿ ಸಂಘವನ್ನು ಸಮಾಜ ಸೇವಕ ಕದಲೂರು ಉದಯ್ ಉದ್ಘಾಟಿಸಿದರು. 
ಜಿಲ್ಲೆ

ಕ್ಷೇತ್ರದ ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ

ಕೆ.ಎಂ.ದೊಡ್ಡಿ: ಕ್ಷೇತ್ರದ ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿದ್ದು, ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಅಂಬರಹಳ್ಳಿ ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಜತೆ ಸೇರಿ ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಗಳಿಗೆ ಒಂದು ದೊಡ್ಡ ಹೆಜ್ಜೆಯಾಗಿ ನನ್ನೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತವಾಗಿ 10 ಸಾವಿರಕ್ಕೂ ಜನರು ಜತೆಗೂಡಿದ್ದು ಅಚ್ಚರಿಯಾಯಿತು ಎಂದು ಹೇಳಿದರು.

ಕಾಂಗ್ರೆಸ್‌ನ ಗ್ಯಾರಂಟಿ ಗೃಹಜೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳ ಬಗ್ಗೆ ಮನೆ ಮನೆಗೆ ತಿಳಿಸಿ. ದಿನೇ ದಿನೆ ಕ್ಷೇತ್ರದ ಜನರು ತೋರುತ್ತಿರುವ ಪ್ರೀತಿ ನನ್ನ ಸಮಾಜ ಸೇವೆಯ ಶಕ್ತಿಯನ್ನು ಹೆಚ್ಚಿಸುತ್ತಿದೆ. ನನ್ನ ಅಭಿಮಾನಿಗಳು ನಾನು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ನೋಡಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಂಘಗಳನ್ನು ಕಟ್ಟಿ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದಕ್ಕೂ ಸಂತಸವಾಗಿದೆ. ಪ್ರಸ್ತುತ ಸಾಮಾಜಿಕ ಚಿಂತನೆಗಳನ್ನು ಇಟ್ಟು ಕೊಂಡು ಸಮಾಜ ಸೇವೆ ಮಾಡುತ್ತಿದ್ದು ಅಧಿಕಾರ ಇದ್ದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.

ಕ್ಷೇತದಲ್ಲಿ ಈಗಾಗಲೇ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಸೇವೆ ಮಾಡುತ್ತಿದ್ದು ಜನ ಸೇವೆಗೆ ನನ್ನ ಜೀವನ ಮುಡುಪಾಗಿಡುತ್ತೇನೆ. ಯಾರಿಗೆ ಯಾವುದೇ ಸಹಾಯ ಬೇಕಿದ್ದರೂ ನೇರವಾಗಿ ಬಂದು ನನ್ನನ್ನು ಕಾಣಬಹುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ಮಹೇಶ್, ಎ.ಜಿ.ಕೃಷ್ಣ, ಯೋಗಾನಂದ, ಸತೀಶ್, ಅರುಣ್, ಎ.ಜಿ.ಲೋಕೇಶ್, ಸಚಿನ್, ನಾಗೇಶ್, ಸೇರಿದಂತೆ ಹಲವರಿದ್ದರು.