ಜಿಲ್ಲೆ

ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರ

ಚಿತ್ರದುರ್ಗ: ಮೆದೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವ ಕಾರಣ ಶೀಘ್ರ ಈ ಭಾಗಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಭರವಸೆ ನೀಡಿದರು.

ಚೈತನ್ಯ ಕ್ಷೇಮಾಭಿವೃದ್ಧಿ ಸಂಘದಿಂದ ಮರುಳಪ್ಪ ಬಡಾವಣೆ ಆದಿಶೇಷ ರೋಟರಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮೆದೇಹಳ್ಳಿಯಲ್ಲಿ ಸಿಸಿ ರಸ್ತೆಗೆ 2 ಕೋಟಿ ರೂ.ಅನುದಾನ ಕೊಟ್ಟಿದ್ದೇನೆ. ಯುಜಿಡಿ ಸಮಸ್ಯೆ ಮೆದೇಹಳ್ಳಿಯೊಂದೇ ಅಲ್ಲ, ಇಡೀ ಚಿತ್ರದುರ್ಗದಲ್ಲಿದೆ. ದುರಸ್ತಿ ಮಾಡಿಸಲಾಗುವುದು ಎಂದು ತಿಳಿಸಿದರು.

ನಿಗಮ, ಮಂಡಳಿಗಳ ನೇಮಕದಲ್ಲಿ ಮೆದೇಹಳ್ಳಿಯವರಿಗೆ ಆದ್ಯತೆ ನೀಡಿದ್ದೇನೆ. ದೇವಸ್ಥಾನಕ್ಕೆ 5 ಲಕ್ಷ ರೂ.ಅನುದಾನ ಕೊಟ್ಟಿದ್ದೇನೆ. 2 ಅಂಗನವಾಡಿಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. 3.50 ಕೋಟಿ ರೂ. ಗಿಂತ ಅಧಿಕ ಅನುದಾನ ಮೆದೇಹಳ್ಳಿ ಗ್ರಾಪಂಗೆ ಮಂಜೂರು ಮಾಡಿಸಿದ್ದೇನೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಪಂಗಳಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರಗಳನ್ನು ಏರ್ಪಡಿಸ ಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಕೆ.ಎನ್. ಕಾವ್ಯಾ ವಿಜಯಕುಮಾರ್ ಮಾತನಾಡಿ, ಶಾಸಕರ ಸಹಕಾರದಿಂದ ಮೆದೇಹಳ್ಳಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ಮಾಜಿ ಅಧ್ಯಕ್ಷ ವಿಜಯಕುಮಾರ್, ಗುರಪ್ಪ, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು ಇದ್ದರು.