ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ 493 ಹಳ್ಳಿಗಳಲ್ಲಿ ಜನರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ನನ್ನ ಗುರಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಕಾಲ್ಕೆರೆ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಿರಿಯೂರಿನ ವಿ.ವಿ.ಸಾಗರದಿಂದ ನೀರು ತಂದು ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಬಹುತೇಕ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ರೈತರ ತೋಟಗಳು ಒಣಗಬಾರದೆಂದು ನಿರಂತರ ವಿದ್ಯುತ್, ಗುಣಮಟ್ಟದ ಸಿಸಿ ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ ನಿರ್ಮಿಸಿದ್ದೇನೆ ಎಂದು ತಿಳಿಸಿದರು.
37 ಕೋಟಿ ರೂ. ಹೆಚ್ಚುವರಿ ಹಣ ಖರ್ಚು ಮಾಡಿ ಕೆರೆಗೆ ನೀರು ತುಂಬಿಸಿದ್ದೇನೆ. ಮತ ಹಾಕಿ ಗೆಲ್ಲಿಸಿದ ಜನರ ಸೇವೆಗಾಗಿ ಐದು ವರ್ಷ ಮನೆ ಮಗನಾಗಿ ಹಗಲಿರುಳು ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು.
ಗ್ರಾಪಂ ಸದಸ್ಯರಾದ ಡಿ.ಎಸ್.ಕುಮಾರ್, ಈರಣ್ಣನಾಯ್ಕ, ಷಣ್ಮುಖಪ್ಪ, ಪರಮೇಶಣ್ಣ, ಜಗದೀಶ್, ಪ್ರಭಣ್ಣ ಇತರರಿದ್ದರು.