ಗೊಲ್ಲರಹಳ್ಳಿ ಗ್ರಾಮದ ಗೇಟ್ ಬಳಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಉದ್ಘಾಟಿಸಿದರು. ರಮೇಶ್, ಮಹಾಲಿಂಗಪ್ಪ, ವೈ.ಕೆ.ದೇವರಾಜ್, ವಿಜಯಕುಮಾರ್ ಇತರರು ಇದ್ದರು. 
ಜಿಲ್ಲೆ

ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರಿ ಭ್ರಷ್ಟಾಚಾರ

ಅರಸೀಕೆರೆ: ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಸಹಸ್ರಾರು ಕೋಟಿ.ರೂ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆ ನಡೆದಲ್ಲಿ ಕರ್ಮಕಾಂಡ ಬಯಲಾಗಲಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.

ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿ ಗ್ರಾಮದ ಗೇಟ್ ಬಳಿ ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಮಹಿಳಾ ಸಮಾವೇಶ, ಮಡಿಲಕ್ಕಿ, ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿ, ಕುಡಿಯುವ ನೀರು, ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಸೇರಿ ಹತ್ತಾರು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಳೆದ ಹದಿನೈದು ವರ್ಷದಲ್ಲಿ ಸಹಸ್ರಾರು ಕೋಟಿ ರೂ.ಅನುದಾನ ಹರಿದು ಬಂದಿದ್ದರೂ ನಿರೀಕ್ಷಿತ ಗುಣಮಟ್ಟದ ಕೆಲಸಗಳು ನಡೆದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಕಳೆದ 20 ವರ್ಷದಲ್ಲಿ ಗಂಡಸಿ ಭಾಗದಲ್ಲಿ ದ್ವೇಷದ ರಾಜಕಾರಣ ಮಾಡಿ ಅಣ್ಣ, ತಮ್ಮಂದಿರ ಮುಖ ನೋಡದಂತೆ ಮಾಡಿದ್ದ ವ್ಯಕ್ತಿ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಾಗಿಲು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ರಾಜಕೀಯ ಸ್ಥಾನಮಾನ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮೋಸ ಮಾಡಿದವರು ಸಾಮಾನ್ಯ ಜನರನ್ನು ಸಮ್ಮನೇ ಬಿಡುತ್ತಾರೆಯೇ?. ಗಾಂಧಿವಾದ ಮುಂದಿಟ್ಟು ಚುನಾವಣೆ ನಡೆಸಿದ ಸಜ್ಜನ ರಾಜಕಾರಣಿ ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ನೋಟು ಹಂಚಿ ಜನಾಶೀರ್ವಾದ ಪಡೆದಿದ್ದಾರೆ. ತಾಪಂ, ಗ್ರಾಪಂಗಳಲ್ಲಿ ಐದಾರು ತಿಂಗಳಿಗೊಮ್ಮೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಧಿಕಾರ ಹಂಚಿಕೆ ಹೆಸರಿನಲ್ಲಿ ಮನಬಂದಂತೆ ಪದಚ್ಯುತಿ ನಡೆಸಿರುವ ಇವರು ಮಾತ್ರ ಶಾಸಕ ಸ್ಥಾನ ತ್ಯಾಗ ಮಾಡಲು ಒಪ್ಪುತ್ತಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತ ಹಾಗೂ ಜನಪರ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ. ಅನ್ನದಾತನ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

ನಿವೃತ್ತ ಸೈನಿಕ ಮಹೇಶ್ ಮಾತನಾಡಿ, ದೇಶಕ್ಕೊಬ್ಬ ಸಮರ್ಥ ಪ್ರಧಾನಿ ನೀಡಿದ ಹೆಮ್ಮೆ ನಮ್ಮದಾಗಿದೆ. ಅದರಂತೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಸಮರ್ಥ ಸಂಘಟಕ ಎನ್.ಆರ್.ಸಂತೋಷ್ ಅವರನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಮುಖಂಡರಾದ ವೈ.ಕೆ.ದೇವರಾಜ್, ವಿಜಯಕುಮಾರ್, ಎಪಿಎಂಸಿ ಮಾಜಿ ಸದಸ್ಯ ದಾಸೇನಹಳ್ಳಿ ಮಹಾಲಿಂಗಪ್ಪ, ಲಾಳನಕೆರೆ ಯೋಗೀಶ್, ಗ್ರಾಪಂ ಸದಸ್ಯ ಜಯರಾಮ್, ಕೊಂಡೇನಾಳು ಪ್ರಸನ್ನ, ಕಣಗಟ್ಟಳ್ಳಿ ಮಂಜುನಾಥ್, ಮುರಳಿ ಇತರರು ಇದ್ದರು.