ಬಾಗಲಕೋಟೆ: ಬೇವೂರಿನ ಗ್ಯಾನಪ್ಪಜ್ಜನ ಮಠವೂ ಸರ್ವೋತ್ತಮವಾಗಿ ಬೆಳೆಯಬೇಕು. ಅದಕ್ಕೆ ಬೇಕಾದ ಸಹಾಯ ಸಹಕಾರ ನೀಡುವೆ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ತಾಲೂಕಿನ ಬೇವೂರ ಗ್ರಾಮದಲ್ಲಿ ಸೋಮವಾರ ಗ್ಯಾನಪ್ಪಜ್ಜನವರ ಕಾರ್ತಿಕೋತ್ಸವ ಅಂಗವಾಗಿ ಲಿಂ.ಪ.ಪೂಜ್ಯ ಮುದಿಯಪ್ಪಜ್ಜನವರ ಬೆಳ್ಳಿ ಮೂರ್ತಿಯ ಪ್ರತಿಷ್ಠಾನ ಹಾಗೂ ಗ್ಯಾನಪ್ಪಜ್ಜನವರ ಪಟ್ಟಾಽಕಾರದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮಠದಿಂದ ಧಾರ್ಮಿಕ ಕ್ಷೇತ್ರ ಬೆಳವಣಿಗೆಯೊಂದಿಗೆ ಜನರ ಬೇಕು ಬೇಡಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಆಸರೆಯಾಗಿರುವ ಈ ಮಠದ ಪೂಜ್ಯರ ಕಾರ್ಯ ಶ್ಲಾಘನೀಯವಾಗಿದ್ದು, ಈ ಮಠದ ಬೆಳವಣಿಗೆಗೆ ಬೇಕಾಗುವ ಸಹಾಯ ಸಹಕಾರ ನೀಡುವೆ ಎಂದರು.
೨೦೨೮ ನಿಮ್ಮೆಲ್ಲರ ಆಶೀರ್ವಾದದಿಂದ ವೀರಣ್ಣ ಚರಂತಿಮಠವರು ಮತ್ತೆ ಶಾಸಕರಾಗುವುದು ಗ್ಯಾರಂಟಿ. ಅವರು ಹಿಂದೆ ಬೇವೂರಿನಲ್ಲಿ ೨ ಕೋಟಿ ರೂ ವೆಚ್ಚದಲ್ಲಿ ಯಡಿಯೂರಪ್ಪನವರು ಸಿ.ಎಂ ಇದ್ದಾಗ ಜಿ.ಜಿ.ಬೇವೂರ ಅವರ ಸ್ಮಾರಕ ಮಾಡಬೇಕು ಎಂದು ಎಲ್ಲವನ್ನು ಸಿದ್ದಮಾಡಿಕೊಂಡಿದ್ದರು. ಕೊನೆ ಹಂತದಲ್ಲಿ ಕೈ ತಪ್ಪಿತು. ಅಲ್ಲಿಂದ ಯಾರು ಮಾಡಲಾಗಿಲ್ಲಾ. ಅದನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಕಲ್ಯಾಣ ಮಂಟಪ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಕಳೆದ ೫೦ ವರ್ಷಗಳಿಂದ ಬೇವೂರಿನ ಗ್ಯಾನಪ್ಪಜ್ಜನವರ ತಮ್ಮ ಹೇಳಿಕೆ ಮೂಲಕ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಅವರ ಬದುಕಿಗೆ ದಾರಿದೀಪವಾಗಿದ್ದಾರೆ. ಪ್ರತಿ ವರ್ಷ ಇಲ್ಲಿ ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಮತ್ತು ಧಾರ್ಮಿಕ ಚಟುಚಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ೫೦ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಸಹಕರಿಸೋಣ ಎಂದರು.
ಪ.ಪೂಜ್ಯ ಗ್ಯಾನಪ್ಪಜ್ಜನವರು ಹಾಗೂ ಬಿಲ್ ಕೆರೂರಿನ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಅಶೋಕ ಸಜ್ಜನ, ಮಹೇಶ ಪಾಟೀಲ, ರಾಜು ನಾಯ್ಕರ, ರಾಜು ಮುದೆನೂರ, ಸುರೇಶ ಕೊಣ್ಣುರ, ನಿಂಗಪ್ಪ ಮಾಗನೂರ, ಶಿವು ವಾಡಕರ ಸೇರಿದಂತೆ ಇತರರು ಇದ್ದರು.