ಕೊಳ್ಳೇಗಾಲ: ಪಟ್ಟಣದ ಸಿದ್ದಯ್ಯನಪುರ ಸಮೀಪವಿರುವ ಅರುಣೋದಯ ಚರ್ಚ್‌ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕ್ಷೇತ್ರದ ಕ್ರೈಸ್ತ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಅರಣೋದಯ ಚರ್ಚ್ ಪಾಸ್ಟರ್ ವಿಲಿ ಅಮಲ್ ದಾಸ್ ಹಾಗೂ ಪುಣ್ಯಶ್ರೀ ಅವರು ಶಾಸಕರು ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 19 ವರ್ಷದ ನಿರಂತರ ಸೋಲಿಗೆ ಕ್ಷೇತ್ರದ ಜನರು ಅಂತ್ಯವಾಡಿ ಅತ್ಯಧಿಕ ಮತಗಳ ಮೂಲಕ ಗೆಲುವು ನೀಡಿದ್ದಾರೆ. ಜನರು ನನ್ನ ಮೇಲಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿಯನ್ನು ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಉಳಿಸಿಕೊಳ್ಳುತ್ತೇನೆ.
ಇಡೀ ಕ್ರೈಸ್ತ ಸಮುದಾಯದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಂತಿತ್ತು. ತಮ್ಮ ಅಮೂಲ್ಯವಾದ ಮತ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅರುಣೋದಯ ಚರ್ಚ್‌ನ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸುತ್ತೇನೆ. ಜನ ಸೇವಕನಾಗಿ ಕ್ಷೇತ್ರದ ಅಭಿವೃದ್ಧಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಕ್ರೈಸ್ತ ಮುಖಂಡ ಜಿ.ಸೆಲ್ವರಾಜ್ ಅವರಿಗೆ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ನಗರಸಭಾ ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಅಕ್ಮಲ್ ಪಾಷ, ಗುತ್ತಿಗೆದಾರ ಪುಟ್ಟಸ್ವಾಮಿ ಮಧುವನಹಳ್ಳಿ, ಉಗನೀಯ ಪುಟ್ಟರಾಜು, ಆನಂದ್, ಚೇತನ್ ಮತ್ತಿತರಿದ್ದರು.