ಜಿಲ್ಲೆ

ಕ್ಷೇತ್ರಗಳ‌ ಅಭಿವೃದ್ಧಿಗಾಗಿ ಸಿಎಂಗೆ ಪತ್ರ ಶಾಸಕ ರಾಯರಡ್ಡಿ ಸ್ಪಷ್ಟನೆ

ಕೊಪ್ಪಳ: ಸಚಿವರು ಮತ್ತು ಶಾಸಕರ ನಡುವೆ ಹೆಚ್ಚಿನ ಸ್ಪಂದನೆ ಇರಬೇಕು ಎನ್ನುವ ಕಾರಣಕ್ಕಾಗಿ ಶಾಸಕ ಬಿ.ಆರ್. ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದಿರುವ ಪತ್ರಕ್ಕೆ ಸಹಿ ಮಾಡಿದ್ದೇನೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಸಿಎಂಗೆ ಪತ್ರ ಬರೆದಿರುವ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕೆಂಬ ದೃಷ್ಟಿಯಿಂದ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪಾಟೀಲ್ ಪತ್ರ ಬರೆದಿದ್ದಾರೆ. ಪತ್ರಕ್ಕೆ ನಾನೂ ಸೇರಿ ಅನೇಕ ಶಾಸಕರು ಸಹಿ ಮಾಡಿದ್ದೇವೆ. ಅಧಿಕಾರಿಗಳ ವರ್ಗಾವಣೆ ಸಂಬಂಧ ಕೆಲ ಶಾಸಕರಿಗೆ ಅಸಮಾಧಾನ ಇರಬಹುದು. ಇಲ್ಲವೆಂದು ಹೇಳುವುದಿಲ್ಲ. ಕೆಲವರು ಇದನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ನನಗೆ ಯಾವುದೇ ಅಸಮಾಧಾನವಿಲ್ಲ. ಸಿದ್ದರಾಮಯ್ಯ ಒಬ್ಬ ಅತ್ಯುತ್ತಮ ಸಿಎಂ. ಹೀಗಾಗಿ ವಿರೋಧ ಪಕ್ಷಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಅದು ಸಹಜ. ನಮ್ಮ ಸರ್ಕಾರ ಹಾಗೂ ಸಿಎಂಗೆ ಯಾವುದೇ ತೊಂದರೆ ಇಲ್ಲ. ಸುಗಮವಾಗಿ ಸರ್ಕಾರ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.