ಹಾಸನ: ಸಂಸದ ಪ್ರಜ್ವಲ್ ರೇವಣ್ಣ 4 ವರ್ಷ ವಿದೇಶದಲ್ಲಿ ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ನಮ್ಮ ಪಕ್ಷ ಹಾಗೂ ಶಾಸಕರ ಬಗ್ಗೆ ಮಾತನಾಡುವ ಮೊದಲು ಸಂಸದರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುವುದನ್ನು ಸಾರ್ವಜನಿಕವಾಗಿ ತಿಳಿಸಲಿ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡರು ಸವಾಲು ಹಾಕಿದರು.
ಪ್ರಜ್ವಲ್ ರೇವಣ್ಣ ಸಂಸದರಾಗಿ ಮಾಡಲು ಕಾಂಗ್ರಸ್ ಬೆಂಬಲವೇ ಕಾರಣ ಎಂಬುವುದನ್ನ ಮರೆಯಬೇಡಿ. ಅವರು ಸಂಸದರಾದ ಮೇಲೆ ಜಿಲ್ಲೆಗೆ ಯಾವ ಹೊಸ ಯೋಜನೆ ತಂದಿದ್ದಾರೆ. ಇವರ ಅವಧಿಯಲ್ಲಿ ಎಷ್ಟು ಅನುದಾನ ತಂದು ಯಾವ ಯಾವ ತಾಲೂಕಿನಲ್ಲಿ ಎನೆಲ್ಲ ಅಭಿವೃದ್ಧಿ ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು.
ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಸರಿಯಾದ ದಾಖಲೆಗಳನ್ನು ನೀಡದ ಕಾರಣ ಅವರ ಸಂಸದ ಸ್ಥಾನ ಅನರ್ಹಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ತಂದಿದ್ದಾರೆ. ಅದೇಶದಲ್ಲಿ ಸರ್ಕಾರಿ ಸೌಕರ್ಯಗಳಾದ ಕಾರು, ಸಂಸದರ ನಿವಾಸ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವಂತಿಲ್ಲ ಎಂದು ಹೇಳಲಾಗಿದೆ. ಆದರೂ ಸಹ ಸಂಸದರು ಕಾರು ಮತ್ತು ನಿವಾಸವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನ್ಯಾಯಾಲಯ ಆದೇಶದ ಉಲ್ಲಂಘಟನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಮೊಮ್ಮಗ, ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ, ಅಪ್ಪ ಮಾಜಿ ಸಚಿವ ಎಂದು ಹೇಳಿಕೊಂಡು ನೀವು ಗೆದ್ದಿರುವುದು. ಜಿಲ್ಲೆಗೆ ನಿಮ್ಮ ಕೊಡುಗೆ ಏನೆಂಬುದನ್ನು ತಿಳಿಸಿ. ನಂತರ ಕಾಂಗ್ರಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಮಾತನಾಡಿ, ನೀವು ಸಾಮಾನ್ಯ ವ್ಯಕ್ತಿಯಾಗಿ ಒಂದು ಗ್ರಾಮ ಪಂಚಾಯಿತಿ ಸ್ಥಾನವನ್ನು ಗೆಲುವುದಿಲ್ಲ ಎಂದು ಕಿಡಿಕಾರಿದರು.
ನಾನು ಸಹ ಲೋಕಸಭಾ ಚುನಾವಣೆಯ ಟಿಕೆಟ್ ಅಕಾಂಕ್ಷಿಯಾಗಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೆ. ಹೈ ಕಮಾಂಡ್ ಟಿಕೆಟ್ ನೀಡಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆ ಟಿಕೆಟ್ ವಿಚಾರ ಕುರಿತು ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದ್ದೇವೆ. ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಕೆ ಮಹೇಶ್, ಖಡಾಖಡಿ ಪೀರ್ ಸಾಬ್, ರಾಮಚಂದ್ರ, ಮಂಜುನಾಥ್ ಇತರರು ಇದ್ದರು.